(ನ್ಯೂಸ್ ಕಡಬ) newskadaba.com ಹಾವೇರಿ , ಜ.08. ಉನ್ನತ ನ್ಯಾಯಾಂಗದ ಮಹತ್ವದ ತೀರ್ಪುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮತ್ತು ಕನ್ನಡದಲ್ಲಿ ಕಾನೂನು ಪುಸ್ತಕಗಳ ಬರವಣಿಗೆ ಮತ್ತು ಪ್ರಕಟಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಕಾನೂನು ಪ್ರಾಧಿಕಾರವನ್ನು ಸ್ಥಾಪಿಸಬೇಕು ಎಂದು ಕಾನೂನು ತಜ್ಞರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡದಲ್ಲಿ ಕಾನೂನು ಸಾಹಿತ್ಯ’ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿ ಕಾನೂನು ತಜ್ಞರು, ಮಾತೃಭಾಷೆಯಲ್ಲಿ ಪುಸ್ತಕಗಳು ಲಭ್ಯವಿಲ್ಲದ ಕಾರಣ ಸಾಮಾನ್ಯ ಜನರಿಗೆ ಕಾನೂನಿನ ಪ್ರಮುಖ ಅಂಶಗಳ ಬಗ್ಗೆ ತಿಳಿಯದಂತಾಗಿದೆ. ನ್ಯಾಯಾಲಯದ ಕಾರ್ಯವೈಖರಿಯನ್ನು ಬಹುಪಾಲು ಇಂಗ್ಲಿಷ್‌ನಲ್ಲಿ ಮಾಡಲಾಗುತ್ತಿರುವ ಕಾರಣ ಕೆಲವರಿಗಷ್ಟೇ ಕಾನೂನಿನ ತೀರ್ಪಿನ ಬಗ್ಗೆ ತಿಳಿಯುವಂತಾಗುತ್ತಿದೆ ಎಂದು ಹೇಳಿದ್ದಾರೆ.