(ನ್ಯೂಸ್ ಕಡಬ) newskadaba.com ನವದೆಹಲಿ, ನ.02: ಗುಜರಾತಿನ ಮೊರ್ಬಿ ಸೇತುವೆ ಕುಸಿತ ದುರಂತದಲ್ಲಿ 135 ಜನರ ಸಾವಿಗೆ ಕಾರಣವಾದ ಆರೋಪಿಗಳಲ್ಲಿ ಒಬ್ಬರು ಈ ಘಟನೆ ನಡೆದಿರುವುದು “ದೇವರ ಇಚ್ಛೆ” ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ. 150 ವರ್ಷಗಳಷ್ಟು ಹಳೆಯದಾದ ಸೇತುವೆಯ ನಿರ್ವಹಣೆಯ ಹೊಣೆ ಹೊತ್ತಿರುವ ಒರೆವಾ ಕಂಪನಿಯ ಮ್ಯಾನೇಜರ್ ದೀಪಕ್ ಪರೇಖ್ ಈ ಹೇಳಿಕೆ ನೀಡಿದ್ದಾರೆ. ಭಾನುವಾರ ಗುಜರಾತಿನಲ್ಲಿ ತೂಗು ಸೇತುವೆ ದುರಂತದನಂತರ ಬಂಧಿಸಲಾದ ಒಂಬತ್ತು ಜನರಲ್ಲಿ ಪರೇಖ್ ಕೂಡ ಒಬ್ಬರು. “ಭಗವಾನ್ ಕಿ ಇಚ್ಚಾ (ದೇವರ ಇಚ್ಛೆ) ಯಿಂದಾಗಿ ದುರದೃಷ್ಟಕರ ಘಟನೆ ಸಂಭವಿಸಿದೆ” ಎಂದು ಅವರು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂಜೆ ಖಾನ್ ಅವರಲ್ಲಿ ಹೇಳಿದ್ದಾರೆ.
ಸೇತುವೆಯ ಕೇಬಲ್ ತುಕ್ಕು ಹಿಡಿದಿದ್ದು,ಸೇತುವೆಯ ನವೀಕರಣ ಕಾರ್ಯ ಕೈಗೆತ್ತಿಕೊಂಡ ಕಂಪನಿಯು ಅದನ್ನು ಬದಲಾಯಿಸಿಲ್ಲ ಎಂದು ಮೊರ್ಬಿ ಉಪ ಪೊಲೀಸ್ ವರಿಷ್ಠಾಧಿಕಾರಿ ಪಿಎ ಝಲಾ ನ್ಯಾಯಾಲಯಕ್ಕೆ ತಿಳಿಸಿದರು. ಅಕ್ಟೋಬರ್ 26 ರಂದು ಸರ್ಕಾರದ ಅನುಮೋದನೆ ಅಥವಾ ಗುಣಮಟ್ಟ ಪರೀಕ್ಷೆ ಇಲ್ಲದೆ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಯಿತು. “ನಿರ್ವಹಣೆ ಮತ್ತು ದುರಸ್ತಿ ಭಾಗವಾಗಿ, ಪ್ಲಾಟ್‌ಫಾರ್ಮ್ ಅನ್ನು ಮಾತ್ರ ಬದಲಾಯಿಸಲಾಗಿದೆ, ಸೇತುವೆಯು ಕೇಬಲ್‌ನಲ್ಲಿದೆ ಮತ್ತು ಕೇಬಲ್‌ಗೆ ಎಣ್ಣೆ ಹಾಕುವುದು ಅಥವಾ ಗ್ರೀಸ್ ಹಾಕುವ ಯಾವುದೇ ಕೆಲಸ ಮಾಡಿಲ್ಲ.ಕೇಬಲ್ ತುಂಡಾಗಿದ, ತುಕ್ಕು ಹಿಡಿದಿದೆ.ಕೇಬಲ್ ದುರಸ್ತಿ ಮಾಡಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು.