ಪ್ರಿಯಕರನ ಬಳಿ ಹಣವಿಲ್ಲವೆಂದು ದೊಡ್ಡಪ್ಪನ ಮನೆ ದೋಚಿದ ಪ್ರೇಮಿಗಳು ಅಂದರ್..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 25. ಖರ್ಚಿಗೆ ಹಣವಿಲ್ಲವೆಂದು ಪ್ರಿಯಕರನ ಜತೆ ಸೇರಿ ದೊಡ್ಡಪ್ಪನ ಮನೆಯನ್ನೇ ದೋಚಿದ ಪ್ರೇಮಿಗಳಿಬ್ಬರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

 


ಬಂಧಿತರನ್ನು ಬಿ.ಕಾಂ ವಿದ್ಯಾರ್ಥಿನಿ ದೀಕ್ಷಿತಾ ಮತ್ತು ಮೆಡಿಕಲ್‌ ವಿದ್ಯಾರ್ಥಿ ಮಧು ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 30 ಸಾವಿರ ರೂ. ನಗದು ಮತ್ತು 200 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಮಧು ಮತ್ತು ದೀಕ್ಷಿತಾ 2 ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ನಡುವೆ ಮಧು, ತನ್ನ ಪ್ರೇಯಸಿಯ ಜೊತೆ ಖರ್ಚಿಗೆ ಹಣವಿಲ್ಲವೆಂದು ತನ್ನ ಅಳಲನ್ನು ಹೇಳಿಕೊಂಡಿದ್ದಾನೆ. ಆಗ ದೀಕ್ಷಿತಾ, ತನ್ನ ದೊಡ್ಡಪ್ಪ ತಿಮ್ಮೇಗೌಡರ ಬಳಿ ಸಾಕಷ್ಟು ಹಣ, ಚಿನ್ನಾಭರಣವಿದ್ದು, ಅದನ್ನು ಕಳ್ಳತನ ಮಾಡಿದರೆ ಸಮಸ್ಯೆ ಪರಿಹಾರ ಎಂದು ಸಲಹೆ ನೀಡಿದ್ದಳು. ಈ ಹಿನ್ನೆಲೆ ಜು. 8ರಂದು ಶಿರಾದಿಂದ ಬೆಂಗಳೂರಿಗೆ ಬಂದಿದ್ದ ಮಧು, ಕಳ್ಳತನಕ್ಕೆ ಸಂಚು ರೂಪಿಸಿ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಮೆಡಿಕಲ್‌ ವಿದ್ಯಾರ್ಥಿಯಾಗಿರುವ ಮಧು, ಪಿಪಿಇ ಕಿಟ್‌ ಧರಿಸಿ ತಿಮ್ಮೇಗೌಡರ ಮನೆಯ ಕಾಂಪೌಂಡ್‌ ಒಳಗೆ ಮಾಟ ಮಂತ್ರದ ವಸ್ತುಗಳನ್ನು ಎಸೆದು ಪರಾರಿಯಾಗಿದ್ದು, ಅದೇ ವೇಳೆ ಸ್ಥಳಕ್ಕೆ ಬಂದ ದೀಕ್ಷಿತಾ, ಕಾಂಪೌಂಡ್‌ ಬಳಿ ಯಾರೋ ಮಾಟಮಂತ್ರದ ವಸ್ತುಗಳು ಬಿಸಾಡಿದ್ದಾರೆ ಎಂದು ಹೇಳಿ ಮನೆಯವರನ್ನು ಕಾಂಪೌಂಡ್‌ ಬಳಿ ಕರೆ ತಂದಿದ್ದಳು. ಇತ್ತ ಎಲ್ಲರೂ ಆ ಕಾಂಪೌಂಡ್ ಬಳಿ ಶುಚಿಗೊಳಿಸುವಾಗ, ಮನೆಯೊಳಗೆ ಹೋದ ದೀಕ್ಷಿತಾ, 90 ಸಾವಿರ ರೂ. ನಗದು ಹಾಗೂ 200 ಗ್ರಾಂ ಚಿನ್ನಾಭರಣ ದೋಚಿದ್ದಳು. ಬಳಿಕ ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದಳು. ಘಟನೆಗೆ ಸಂಬಂಧಿಸಿ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಪಿಪಿಇ ಕಿಟ್‌ ಹಾಕಿಕೊಂಡು ಅಪರಿಚಿತ ವ್ಯಕ್ತಿ ಬಂದು ಹೋಗಿರುವುದು ಗೊತ್ತಾಗಿದೆ. ಬಳಿಕ ಟವರ್‌ ಲೋಕೇಷನ್‌ ಹಾಕಿ ಆರೋಪಿಯನ್ನು ಶಿರಾದಲ್ಲಿ ಬಂಧಿಸಿದ್ದು, ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಿಜೆಪಿ ಅಧಿಕಾರಕ್ಕೆ ಬಂದರೆ ಅನಂತ ಕುಮಾರ್ ಮುಖ್ಯಮಂತ್ರಿ ► ನಾವು ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗಲಿದ್ದೇವೆ: ಬಸವರಾಜ್ ಹೊರಟ್ಟಿ

error: Content is protected !!
Scroll to Top