ಸಬಳೂರು ಶಾಲೆಯಲ್ಲಿ ಮೆಟ್ರಿಕ್ ಮೇಳ ► ಯಶಸ್ವಿಯಾಗಿ ನಡೆದ ನಾಲ್ಕನೇ ವರ್ಷದ ಮಕ್ಕಳ ಸಂತೆ

(ನ್ಯೂಸ್ ಕಡಬ) newskadaba.com ಕಡಬ, ನ.09. ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ವರ್ಷದ ‘ಮೆಟ್ರಿಕ್ ಮೇಳ’ ಮಕ್ಕಳ ಮಾರುಕಟ್ಟೆ ಬುಧವಾರ ಯಶಸ್ವಿಯಾಗಿ ನಡೆಯಿತು.

ಗ್ರಾಮೀಣ ಪ್ರದೇಶವಾದ ಸಬಳೂರು ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಗೆಡ್ಡೆ ಗೆಣಸು, ಹೂವು, ಹಣ್ಣು ಹಂಪಲುಗಳನ್ನು, ತಿಂಡಿ ತಿನಿಸುಗಳನ್ನು ಶಾಲಾ ಆವರಣದಲ್ಲಿ ಮಾರಾಟ ಮಾಡಿ ಸಂತೆಯ ವಾತಾವರಣವನ್ನು ನೆನಪಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವ್ಯವಹಾರ ಜ್ಞಾನವನ್ನು ವೃದ್ಧಿಸುವ ಕಾರ್ಯವನ್ನು ಮಾಡಲಾಯಿತು. ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳು ತಂದಿರಿಸಿದ ವಸ್ತಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹ ನೀಡಿದರು. ಬೆಳಿಗ್ಗೆ ಪ್ರಾರಂಭವಾದ ಸಂತೆ ಮಾರುಕಟ್ಟೆ ಮಧ್ಯಾಹ್ನದ ಒಳಗೆ ಎಲ್ಲಾ ವಸ್ತುಗಳು ಮುಗಿದಿದ್ದು, ಭರ್ಜರಿ ವ್ಯಾಪಾರ ನಡೆಯಿತು. ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದ ತರಕಾರಿಗಳನ್ನು ಶಾಲಾ ಆವರಣದಲ್ಲಿ ಮಾರಾಟ ಮಾಡಿ ಸಂಪಾದನೆ ಮಾಡಿ ಪುಡಿಗಾಸು ಜೇಬಿಗಿಳಿಸಿಕೊಂಡರು. ನಾಲ್ಕರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ತಕ್ಕ ಮಟ್ಟಿಗೆ ವ್ಯಾಪಾರ ನಡೆಸಿದರು. ತರಕಾರಿ ಖರೀದಿಸಿದ ಗ್ರಾಹಕರಾದ ಪೋಷಕರು, ಶಿಕ್ಷಕರು, ಹಾಗೂ ಸಾರ್ವಜನಿಕರು ಖುಷಿಯಿಂದಲೇ ತಾಜಾ ತರಕಾರಿ ವಸ್ತಗಳನ್ನು ಖರೀಸಿದರು.

Also Read  ಮುಂದುವರಿದ ಕೊರೋನಾ ಆರ್ಭಟ ➤ ದ. ಕನ್ನಡದಲ್ಲಿ ಸಾವಿನ ಸಂಖ್ಯೆ 107ಕ್ಕೆ ಏರಿಕೆ

ಕಲಿಕೆಯ ಒಂದು ಭಾಗವಾಗಿ ನಡೆದ ಈ ಗ್ರಾಹಕ ಮೇಳ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ವೃದ್ಧಿಸುವ ನಿಟ್ಟಿನಲ್ಲಿ ಶಾಲಾ ವಿಜ್ಞಾನ ಸಂಘ ಆಯೋಜಿಸಿದ್ದ ಈ ಕಾರ್ಯಕ್ರಮ ಪ್ರತೀ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಆದರೆ ಸಬಳೂರು ಶಾಲೆಯಲ್ಲಿ ಅರ್ಥಪೂರ್ಣವಾಗಿ ಮಕ್ಕಳಲ್ಲಿ ತರಕಾರಿಗಳ ಸಂತೆ ಮಾರಾಟ ಮಾಡಿಸಿ ಪ್ರತ್ಯೇಕವಾಗಿ ಕಾರ್ಯಕ್ರಮವನ್ನು ಮಾಡುತ್ತಿರುವ ತಾಲೂಕಿನ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.


ಸೊಪ್ಪು ತರಕಾರಿಗಳಾದ ಬಸಳೆ, ಅರಿವೆ, ತಿಮರೆ ಬೇವು, ನುಗ್ಗೆ ಸೊಪ್ಪು, ಹಸಿ ತರಕಾರಿಗಳಾದ, ಸೌತೆ, ಪಡುವಳ ಕಾಯಿ, ಚೀನಿಕಾಯಿ, ಕುಂಬಳ ಕಾಯಿ, ತೊಂಡೆ ಕಾಯಿ, ಬೆಂಡೆ ಕಾಯಿ, ನುಗ್ಗೆ ಕಾಯಿ, ಬಾಳೆ ಕಾಯಿ, ಕರಿಕೆಸು ದಂಟು, ಗೆಡ್ಡೆ ಗೆಣಸು, ಸುವರ್ಣಗೆಡ್ಡೆ, ಕೆಸುವಿನ ಗೆಡ್ಡೆ, ಮರಗೆಣಸು, ಸಿಹಿಗೆಣಸು, ಅರಶಿನ ಕೊಂಬು, ಹಣ್ಣುಗಳಾದ ಬಾಳೆ ಹಣ್ಣು, ಪಪ್ಪಾಯಿ, ಸಿಯಾಳ, ತೆಂಗುನ ಕಾಯಿ, ಔಷದೀಯ ಗುಣಗಳ ಗಡಿಮದ್ದು ಸೊಪ್ಪು, ಹೂವಿನ ಗಿಡಗಳಾದ ಸೇವಂತಿಗೆ, ಗೊಂಡೆ, ಜೀನಿಯ, ಮಲ್ಲಿಗೆ, ಕಾಕಡ ಮಲ್ಲಿಗೆ, ಗುಲಾಬಿ, ಜಂಬುನೇರಳೆ ಗಿಡ, ಕಬ್ಬು, ಕೆಸುವುನ ಬಳ್ಳಿ, ನಿಂಬೆ ಹುಳಿ, ಮಾವಿನ ಮಿಡಿ. ಉಪ್ಪಡ್ ಪಚ್ಚಿಲ್, ಹಲಸಿನ ಬೀಜ, ವೀಳ್ಯದೆಲೆ, ಪಾನಿಪುರಿ, ಬೇಲ್ಪುರಿ, ಟೊಮೆಟೋ ಸೂಪ್, ಮಜ್ಜಿಗೆ ನೀರು, ಸೀಯಾಳ ಜ್ಯೂಸ್, ಚರ್ಮುರಿ, ಶರಬತ್, ಕರಿದ ತಿಂಡಿಗಳು ಮಾರಾಟದ ಗ್ರಾಮೀಣ ಸಂತೆ ಮೇಲೈಸಿತ್ತು. ವಿದ್ಯಾರ್ಥಿಗಳ ಪೈಕಿ ಆರನೆ ತರಗತಿಯ ಜೀವಿತ್ ಬಿ.ಎಸ್ ಹಾಗೂ ಹರ್ಷಿತ್ ಕುಮಾರ್ ಬಿ.ಎಂ ಅತೀ ಹೆಚ್ಚು ವ್ಯಾಪಾರ ನಡೆಸಿದರು.

Also Read  ಮಂಗಳೂರು: ಬೆಂಕಿಗಾಹುತಿಯಾದ ಮನೆ   ➤ ದಿಕ್ಕುತೋಚದಂತಾಗಿದೆ ಬಡ ಕುಟುಂಬ

ಬೆಳಿಗ್ಗೆ ಪ್ರಾರಂಭವಾದ ಮೆಟ್ರಿಕ್ ಮೇಳವನ್ನು ಎಸ್ಡಿಎಂಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ ತರಕಾರಿ ಖರೀದಿಸುವ ಮೂಲಕ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ವಾರಿಜ, ಗ್ರಾಹಕ ಮೇಳದ ಮಾರ್ಗದರ್ಶಿ ಶಿಕ್ಷಕಿ ಮಮತಾ ಪಿ, ಶಿಕ್ಷಕರಾದ ಪದ್ಮಯ್ಯ ಗೌಡ, ಯಶೋಧಾ ಬಿ, ತಾರಾದೇವಿ, ವಾರಿಜ ಏಣಿತಡ್ಕ, ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top