(ನ್ಯೂಸ್ ಕಡಬ) newskadaba.com ಕುಂದಾಪುರ, ನ.6. ಬೋಟ್ ಚಾಲಕನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮ್ಯಾಂಗನೀಸ್ ರಸ್ತೆಯ ಸಮೀಪ ನಡೆದಿದೆ.
ಮೃತ ಯುವಕನನ್ನು ಕುಂದಾಪುರ ನಿವಾಸಿ ಉಮೇಶ ಮೋಗವೀರ (32) ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ಬೋಟ್ ಚಾಲಕನಾಗಿದ್ದು, ಮ್ಯಾಂಗನೀಸ್ ಬೋಟ್ ಕಟ್ಟುವ ಸ್ಥಳದಲ್ಲಿ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೇಣು ಹಾಕಿ ಯಾರೋ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದು ಇದರ ಬಗ್ಗೆ ಸೂಕ್ತ ತನಿಖೆಗಾಗಿ ಆಗ್ರಹಿಸಿದ್ದಾರೆ.
ಗಂಗೊಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿಗೆ ಮೃತ ದೇಹ ಕಳುಹಿಸಲಾಗಿದೆ.