(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಅ.30. ಭಾರತೀಯ ಕಾರುಗಳನ್ನು ಸುರಕ್ಷಿತವಾಗಿಸಲು ನಿಟ್ಟಿನಲ್ಲಿ ಹೊಸ ಸುರಕ್ಷತಾ ನಿಯಮಗಳನ್ನು 2019ರ ಜುಲೈ 1ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹೊಸ ನಿಯಮದಿಂದಾಗಿ ಅಪಘಾತಗಳ ಸಂದರ್ಭದಲ್ಲಿ ಪ್ರಾಣಹಾನಿಯ ಪ್ರಮಾಣ ಕಡಿಮೆಯಾಗಲಿದೆ.
ಹೌದು, ಭಾರತದ ರಸ್ತೆಗಳು ಅತ್ಯಂತ ಅಪಾಯಕಾರಿ ಎನ್ನಿಸುವ ಹಂತಕ್ಕೆ ಬಂದು ತಲುಪಿದ್ದು, ದಿನಬೆಳಗ್ಗೆ ಎದ್ದರೆ ಸಾಕು ಟಿವಿ, ಪೇಪರ್‌ಗಳಲ್ಲಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಬರೀ ಅಪಘಾತಗಳ ಬಗ್ಗೆ ಕೇಳಿ, ಕೇಳಿ ಮನಸ್ಥಿತಿಗಳು ಅಪಘಾತಗಳ ಬಗ್ಗೆ ‘ನಿರ್ಲಕ್ಷ್ಯ’ ಧೋರಣೆ ಹೊಂದುವ ಮಟ್ಟಕ್ಕೆ ಬಂದು ನಿಂತಿವೆ. ಗಂಟೆಗೆ ನೂರಾರು ಜನ ರಸ್ತೆಗಳ ಮೇಲೆ ಪ್ರಾಣ ಬಿಡುತ್ತಿರುವುದನ್ನು ಕಂಡು, ಇದಕ್ಕೆ ಕೊನೆಯೇ ಇಲ್ಲವೇ ? ಎಂಬ ಅಸಹಾಯಕ ಮಾತುಗಳು ನಮ್ಮಲ್ಲೇ ಮೂಡಿರುವುದು ಸತ್ಯ !!
ಆದ್ರೆ, ಇದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಭಾರತದಲ್ಲಿ ಅನುಷ್ಠಾಗೊಳಿಸಲು ಮುಂದಾಗಿದ್ದು, ಈ ನಿರ್ಧಾರವು ಸಾಕಷ್ಟು ಜೀವಗಳಿಗೆ ಜೀವರಕ್ಷಕವಾಗಿ ಕೆಲಸ ಮಾಡಲಿದೆ ಎನ್ನಬಹುದು.
ನಿಯಮದಲ್ಲೇನಿದೆ..???
ಹೊಸತಾಗಿ ಮಾರುಕಟ್ಟೆಗೆ ಬರುವ ಎಲ್ಲ ಮಾದರಿಯ ಕಾರುಗಳಲ್ಲೂ ಏರ್‌ಬ್ಯಾಗ್, ಸೀಟ್‌ಬೆಲ್ಟ್ ರಿಮೈಂಡರ್, ಕಾರು 80 ಕಿ.ಮೀ. ವೇಗದ ಮಿತಿ ದಾಟಿದರೆ ಅಲರಾಂ ವ್ಯವಸ್ಥೆ ಕಡ್ಡಾಯ. ರಿವರ್ಸ್ ಪಾರ್ಕಿಂಗ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಕೂಡ ಇರಲೇಬೇಕು. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಈ ಹೊಸ ನಿಯಮ, ಅನುಷ್ಠಾನ ದಿನಾಂಕವನ್ನು ಅನುಮೋದಿಸಿದ್ದು, ಶೀಘ್ರದಲ್ಲಿಯೇ ಅದನ್ನು ಅಧಿಕೃತವಾಗಿ ಪ್ರಕಟಿಸಲಿದೆ.
ಪ್ರಯಾಣಿಕರ ಮತ್ತು ಪಾದಚಾರಿಗಳ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ನಿಯಮವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಅನುಮೋದಿಸಿದ್ದು, ಪ್ರತಿ ವರ್ಷ ಸಂಭವಿಸುವ 1.52 ಲಕ್ಷ ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸುವ ಕಾರ್ಯ ಮುಂದಿನ ವರ್ಷದಿಂದ ನೆಡೆಯಲಿದೆ.
ದೀರ್ಘಕಾಲದಿಂದಲೂ ಸಹ ಹೆಚ್ಚುವರಿ ಸುರಕ್ಷತಾ ಲಕ್ಷಣಗಳನ್ನು ಅಳವಡಿಸುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದವು. ಆದರೆ, ಒಮ್ಮತದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗುತ್ತಿದ್ದವು ಎನ್ನಬಹುದು. ಕೊನೆಗೂ ರಸ್ತೆ ಸಾರಿಗೆ ಇಲಾಖೆಯು ಹೊಸ ನಿಯಮ ಅಂಗೀಕರಿಸಿದೆ.
ಪ್ರಸ್ತುತ, ಬಹಳಷ್ಟು ವಾಹನ ತಯಾರಕ ಸಂಸ್ಥೆಗಳು ಸುರಕ್ಷತಾ ವೈಶಿಷ್ಟ್ಯಗಳನ್ನು ಕಾರಿನ ಒಂದು ಭಾಗವಾಗಿ ನೀಡುತ್ತಿವೆ ಮತ್ತು ಉನ್ನತ-ಶ್ರೇಣಿಯ ಐಷಾರಾಮಿ ವಾಹನಗಳಲ್ಲಿ ಮಾತ್ರ ಈ ವೈಶಿಷ್ಟ್ಯಗಳನ್ನು ಒದಗಿಸುತ್ತಿರುವುದನ್ನು ನಾವು ನೋಡಬಹುದಾಗಿದೆ.
ಹೊಸ ಕಾರುಗಳು 80 km ವೇಗವನ್ನು ದಾಟಿದ ನಂತರ ಆಡಿಯೋ ಎಚ್ಚರಿಕೆ, ಅದೇ ವಾಹನವು 100 ಕಿಲೋಮೀಟರ್ ದಾಟಿದಾಗ ಎಚ್ಚರಿಕೆಯು ಚುರುಕಾಗಿಸುವ ವ್ಯವಸ್ಥೆ ಮತ್ತು ಈ ವೇಗ 120 ಕಿ.ಮೀ.ಗಿಂತಲೂ ಹೆಚ್ಚಿಗೆ ಹೋದಾಗ ತಡೆರಹಿತ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ತರಲಾಗುತ್ತಿದೆ.
ಹಿಂಭಾಗದ ಸಂವೇದಕಗಳು ಮತ್ತು ಗಾಳಿಚೀಲಗಳನ್ನು ಹಗುರ ವಾಣಿಜ್ಯ ವಾಹನಗಳಿಗೂ ಕಡ್ಡಾಯಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ, ಪ್ರಾಥಮಿಕವಾಗಿ ನಗರ ಪ್ರದೇಶಗಳಲ್ಲಿ ಮಾತ್ರ ಈ ನಿಯಮ ಅನುಷ್ಠಾನಗೊಳ್ಳಲಿದೆ.