(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.26: ಮುಂಗಾರು ಆಗಮನದ ಬಳಿಕ ಬಿರುಸಾಗಿದ್ದ ಮಳೆ, ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊಂಚ ಕಡಿಮೆಯಾಗಿದೆ. ಆದರೆ, ಇಂದಿನಿಂದ ಮತ್ತೆ ಮಳೆಯ ಆರ್ಭಟ ಶುರುವಾಗಲಿದ್ದು, 3 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆಯಾಗಲಿದ್ದು, ಜೂನ್ 27ರಿಂದ ರಾಜ್ಯಾದ್ಯಂತ ಬಹುತೇಕ ಪ್ರದೇಶಗಳಲ್ಲಿ ವರುಣನ ಆರ್ಭಟ ಹೆಚ್ಚಲಿದೆ. ಜೂನ್ 30ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಜೂನ್ 28ರಿಂದ 2 ದಿನ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಜೂನ್ 28ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.