(ನ್ಯೂಸ್ ಕಡಬ) newskadaba,ಮಂಗಳೂರು ಜೂ.26: ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಮಂಗಳೂರು ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶಪಡಿಸುವ ಕಾರ್ಯಕ್ರಮ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಲ್ನಾಡು ಕೈಗಾರಿಕಾ ಪ್ರದೇಶದ ರಾಮ್ ಕಿ ಬಯೋ ಮೆಡಿಕಲ್ ವೆಸ್ಟ್ ಟ್ರೀಟ್ಮೆಂಟ್ ಕಂಪನಿಯಲ್ಲಿ ನಡೆಯಿತು.
ಈ ಸಂದರ್ಭ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ ಕರ್ನಾಟಕ ರಾಜ್ಯಾದ್ಯಂತ ಡಿಜಿ ಐಜಿಪಿ ಪ್ರವೀಣ್ ಸೂದ್ ನೇತೃತ್ವದಲ್ಲಿ ನ್ಯಾಯಾಲಯ, ಡ್ರಗ್ಸ್ ನಾಶ ಕಮಿಟಿ ಅನುಮತಿ ಪಡೆದುಕೊಂಡು ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಮಂಗಳೂರು ಕಮಿಷನರೇಟ್ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳಲ್ಲಿ ಪತ್ತೆಯಾದ ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ . ನಗರ ವ್ಯಾಪ್ತಿಯಲ್ಲಿ ಸುಮಾರು 50 ಪ್ರಕರಣಕ್ಕೆ ಸಂಬಂಧಪಟ್ಟಂತೆ 130ಕೆಜಿ ಕ್ಕೂ ಹೆಚ್ಚು ಗಾಂಜಾ ಕೋಕೆನ್ ಚರಸ್ ಸಹಿತ ಹತ್ತು ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಇವತ್ತು ನಾಶಪಡಿಸಲಾಗಿದೆ ಎಂದರು.