(ನ್ಯೂಸ್ ಕಡಬ) newskadaba.com ಕಡಬ, ಅ.17. ತಾಲೂಕು ಕೇಂದ್ರದಲ್ಲಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ರವರ ಪ್ರತಿಮೆಯನ್ನು ಅನಾವರಣಗೊಳಿಸುವುದಲ್ಲದೆ ಡಿಸಿ ಮನ್ನಾ ಒತ್ತುವರಿಯಾದ ಜಾಗವನ್ನು ಭೂರಹಿತ ದಲಿತ ವರ್ಗಕ್ಕೆ ನೀಡುವುದು ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಶೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕಡಬ ತಾಲೂಕು ಘೋಷಣೆಯಾಗಿದ್ದು ತಾಲೂಕಿನ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳುವಾಗ ಅಂಬೇಡ್ಕರ್ ಪ್ರತಿಮೆಯನ್ನು ಕಡಬ ತಾಲೂಕು ಕೇಂದ್ರದಲ್ಲಿ ಅನಾವರಣಗೊಳಿಸಬೇಕು. ತಹಶೀಲ್ದಾರರು ದಲಿತ ಕಾಲೋನಿಗೆ ಭೇಟಿ ಕೊಟ್ಟು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಕಡಬದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಸರಿಯಾದ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಇರುವುದಿಲ್ಲ. ಅಲ್ಲಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಕಂಪ್ಯೂಟರ್ ತರಬೇತಿ, ವಾಹನ ತರಬೇತಿ, ಟೈಲರಿಂಗ್ ತರಬೇತಿ ನೀಡುವುದಿಲ್ಲ. ಸರಕಾರಿ ಜಮೀನಿನಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು. ಸರಕಾರಿ ಜಮೀನಿನಲ್ಲಿ ಎಲ್ಲಾ ವರ್ಗದ ಕಡುಬಡ ಜನರಿಗೆ ಮನೆಕಟ್ಟಲು ಅವಕಾಶ ಮಾಡಿಕೊಡಬೇಕು. ಗುತ್ತಿಗೆ ಆಧಾರದ ಮೇಲೆ ವಿವಿಧ ಇಲಾಖೆಗಳಲ್ಲಿ ದಲಿತ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕು. ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸರಿಯಾಗಿ ಅನುಷ್ಠಾನಗೊಳಿಸದೇ ಇದ್ದು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಪೆರಾಬೆ ಗ್ರಾ.ಪಂ.ನ ಮರುವಂತಿಲ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಕೂಡಲೇ ವ್ಯವಸ್ಥೆಗೊಳಿಸಬೇಕು. ಮೊದಲಾದ ಮನವಿಯನ್ನು ತಹಶೀಲ್ದಾರರಿಗೆ ನೀಡಲಾಗಿದ್ದು ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಮನವಿ ನೀಡಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ದಲಿತ ಸಂ.ಸಮಿತಿ ಜಿಲ್ಲಾ ಪ್ರತಿನಿಧಿ ಗಿರೀಶ್ ಕುಟ್ರುಪ್ಪಾಡಿ, ತಾಲೂಕು ಮಹಿಳಾ ಸಂಚಾಲಕಿ ಸುಂದರಿ ಕಲ್ಲುಗುಡ್ಡೆ, ದಲಿತ ಮುಖಂಡರಾದ ವಸಂತ ಕುಬಲಾಡಿ, ರಾಜೇಶ್ ನಿಡ್ಡೊ, ಶೋಭಾ ದೋಂತಿಲಡ್ಕ, ಪಾರ್ವತಿ ಕೋಡಿಂಬಾಳ, ಶೇಖರ ಮರುವಂತಿಲ, ಕೇಶವ ಕೋಡಿಂಬಾಳ, ಉಮೇಶ್ ಕೋಡಿಂಬಾಳ, ಸುಂದರ ಕುತ್ಯಾಡಿ, ಸತೀಶ್ ದೋಂತಿಲಡ್ಕ, ಕುಶಲ ದೋಂತಿಲಡ್ಕ, ವಿಜಯ ದೋಂತಿಲಡ್ಕ, ಮೊದಲಾದವರು ಉಪಸ್ಥಿತರಿದ್ದರು.