(ನ್ಯೂಸ್ ಕಡಬ) newskadaba.com ಮಂಗಳೂರು, ಜ.06: ನಗರದ ಮೂರು ದೇವಸ್ಥಾನಗಳ ಕಾಣಿಕೆ ಡಬ್ಬಿಗೆ ಕಿಡಿಗೇಡಿಗಳು ನಕಲಿ ನೋಟು ಹಾಕಿದ್ದು, ಅದರಲ್ಲಿ ಧರ್ಮದ ಅವಹೇಳನ ಮಾಡುವ ಸಂದೇಶ ಹರಡಿದ್ದಾರೆ. ಹೀಗಾಗಿ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದ್ದಾರೆ.
ಹಾಗೂ ಕೃತ್ಯ ಎಸಗಿದವರನ್ನು ತಕ್ಷಣ ಪತ್ತೆ ಹಚ್ಚಿ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ ಆಗ್ರಹಿಸಿದ್ದಾರೆ. ಯಾವುದೇ ಧರ್ಮದ ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರುವಂತೆ ನಡೆದುಕೊಳ್ಳುವುದು ಸರಿಯಲ್ಲ. ಇದು ಅವಿವೇಕಿಗಳ ಹಾಗೂ ಹೇಡಿಗಳ ಕೃತ್ಯವಾಗಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ. ಇದರಿಂದ ಕೃತ್ಯ ಎಸಗಿದವನ ವಿಕೃತ ಮನಸ್ಸು ಯಾವ ರೀತಿಯದ್ದು ಎಂದು ತಿಳಿದು ಬರುತ್ತದೆ ಎಂದರು.
ಇನ್ನೊಂದು ಧರ್ಮದ ಧಾರ್ಮಿಕ ನಂಬಿಕೆಗೆ ಮಸಿಬಳಿಯುವ ಇರಾದೆಯಿಂದ ಹಾಗೂ ಸಮಾಜದ ಶಾಂತಿ, ಕೋಮು ಸಾಮರಸ್ಯ ಕದಡಲು ಈ ರೀತಿಯ ಕೃತ್ಯ ಎಸಗಲಾಗಿದೆ.ಇಂತಹ ಘಟನೆಗಳು ಮತ್ತೆ ನಡೆಯದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ ಆಗ್ರಹಿಸಿದ್ದಾರೆ.