(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಇಲ್ಲಿನ ರಥಬೀದಿ ಬಳಿಯ ನ್ಯೂ ಚಿತ್ರ ಟಾಕೀಸ್ ಮುಂಭಾಗದಲ್ಲಿ ಕರ್ತವ್ಯ ನಿರತರಾಗಿದ್ದ ಹೆಡ್ ಕಾನ್ ಸ್ಟೇಬಲ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುದ್ರೋಳಿ ನಿವಾಸಿ ಮಹಮ್ಮದ್ ನವಾಝ್ (30) ಹಾಗೂ ಇನ್ನೋರ್ವ 16 ವರ್ಷದ ಬಾಲಕ ಎಂದು ತಿಳಿದುಬಂದಿದೆ. ನವಾಝ್ ಗೆ ಡಿ.24ರ ತನಕ ನ್ಯಾಯಾಂಗ ಬಂಧನ ವಿಧಿಸಿ, ಬಾಲಕನನ್ನು ಉಡುಪಿಯ ನಿಟ್ಟೂರಿನ ಬಾಲಮಂದಿರಕ್ಕೆ ರವಾನಿಸಲಾಗಿದೆ. ಕಳೆದ 2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ನೌಶೀನ್‌ನ ಸಂಬಂಧಿ ನವಾಝ್ ಎಂದು ತಿಳಿದುಬಂದಿದೆ. ಈ ಘಟನೆಯ ಪ್ರತಿಕಾರವಾಗಿ ಈತ ಪೊಲೀಸ್ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.