(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17: ನಗರದ ಎರಡು ಕಡೆಗಳಲ್ಲಿ ಕಾಣಿಸಿಕೊಂಡ ಉಗ್ರ ಪರ ಗೋಡೆ ಬರಹಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ ಎನ್ನಲಾಗಿದೆ.
ಬಂಧಿತ ಆರೋಪಿ ತೀರ್ಥಹಳ್ಳಿಯ ಮಹಮ್ಮದ್ ಶಾರೀಕ್ ಕೆಲವು ಸಂಘಟನೆಗಳ ಸಂಪರ್ಕ ಹಾಗೂ ವಿದೇಶದಲ್ಲಿರುವ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾನೆ ಎನ್ನುವ ಮಾಹಿತಿಯ ಹಿನ್ನೆಲೆ ಎನ್‌ಐಎ ತಂಡ ನಗರಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಪೊಲೀಸ್ ಅಧಿಕಾರಿಗಳು ಎನ್‌ಐಎ ತಂಡದ ಆಗಮನದ ಬಗ್ಗೆ ದೃಢಪಡಿಸಿಲ್ಲ. ಉಗ್ರಪರ ಗೋಡೆ ಬರಹಕ್ಕೆ ಬಳಸಿದ ಪರಿಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳೂ ಕೂಡಾ ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ತೀರ್ಥಹಳ್ಳಿಯಲ್ಲಿರುವ ತನ್ನ ತಂದೆಯ ಹೋಲ್‌ಸೇಲ್ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಶಾರೀಕ್ ಆಗಾಗ ನಗರಕ್ಕೆ ಭೇಟಿ ನೀಡುತ್ತಿದ್ದ. ಅಲ್ಲದೇ, ತನ್ನ ದುಷ್ಕೃತ್ಯಕ್ಕೆ ನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮಾಝ್ ಮುನೀರ್ ಅನ್ನು ಕೂಡಾ ಸೇರಿಸಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಮೂಲದ ಇನ್ನೋರ್ವ ಆರೋಪಿ ಕೂಡಾ ಶಾಮೀಲಾಗಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.