(ನ್ಯೂಸ್ ಕಡಬ) newskadaba.com ಕಡಬ,ಅ.4. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಾತೃಪೂರ್ಣ ಯೋಜನೆಗೆ ಚಾಲನೆ ನೀಡಲಾಯಿತು.
ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಗರ್ಭಿಣಿ, ಬಾಣಂತಿಯರಿಗೆ ಬಿಸಿಯೂಟ, ಹಾಲು, ಮೊಟ್ಟೆ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ರಾಜ್ಯಾದ್ಯಂತ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಿರ್ಜೀವ ಜನನ, ರಕ್ತ ಹೀನತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಗರ್ಭಿಣಿ ಬಾಣಂತಿಯರು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದರೊಂದಿಗೆ ಆರೋಗ್ಯಪೂರ್ಣ ತಾಯಂದಿರಾಗಿ ಜೀವನ ಸಾಗಿಸಬೇಕೆಂಬ ನಿಲುವಿನೊಂದಿಗೆ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತೀ ಅಂಗನವಾಡಿ ಕೇಂದ್ರಗಳಲ್ಲಿ ಆ ವ್ಯಾಪ್ತಿಯ ಗರ್ಭಿಣಿ, ಬಾಣಂತಿಯರಿಗೆ ಮಧ್ಯಾಹ್ನ ಅಂಗನವಾಡಿಯಲ್ಲೇ ತಯಾರಿಸಿದ ಬಿಸಿಯೂಟ, ಹಾಲು, ಮೊಟ್ಟೆ, ನೀಡುವುದರೊಂದಿಗೆ ಪ್ರತಿಯೊಬ್ಬ ಮಹಿಳೆಯರು ನೆಮ್ಮದಿಯ ಬದುಕನ್ನು ಸಾಗಿಸುವಂತಾಗಿ, ಈ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ತಾ.ಪಂ.ಸದಸ್ಯ ಗಣೇಶ್ ಕೈಕುರೆ ಮಾತನಾಡಿ ಮಹಿಳಾ ಸಬಳೀಕರಣದೊಂದಿಗೆ ಸಮೃದ್ದಿ ಜೀವನ ನಡೆಸಲು ಈ ಯೋಜನೆಯು ಅತೀ ಅಗತ್ಯವಾಗಿದ್ದು ಗರ್ಭಿಣಿ ಬಾಣಂತಿಯರ ಆರೋಗ್ಯವನ್ನು ಕಾಪಾಡುವಲ್ಲಿ ಮಾತೃಪೂರ್ಣ ಯೋಜನೆ ಉತ್ತಮ ಯೋಜನೆಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಅಂಗನವಾಡಿಯಲ್ಲಿ ಬಂದು ಬಿಸಿಯೂಟ ಸೇವಿಸುವುದರೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಇಂದಿನ ಮಹಿಳೆಯರು ಭಾಗ್ಯವಂತರು. ಮೊದಲು ನಾವು ಚಿಕ್ಕಂದಿನಲ್ಲಿರುವಾಗ ನಮ್ಮ ತಾಯಂದಿರಿಗೆ ಯಾವುದೇ ಸೌಲಭ್ಯಗಳು ಇರಲಿಲ್ಲ. ಆದರೆ ಈಗಿನ ನಮ್ಮ ಸರಕಾರ ಬೆವರು ಸುರಿಸದೇ ಕಠಿಣ ದುಡಿಮೆ ಇಲ್ಲದೆ ನಿರಾಯಾಸವಾಗಿ ಬದುಕುವ ಹಲವಾರು ಯೋಜನೆಗಳನ್ನು ತರುತ್ತಿದ್ದು ನಮ್ಮ ಸಹೋದರಿಯರು ಸುಖೀ ಜೀವಿಗಳಾಗಿ ನೆಮ್ಮದಿಯಿಂದ ಆರೋಗ್ಯವಂತ ಜೀವನವನ್ನು ನಡೆಸಲು ಮಾತೃಪೂರ್ಣದಂತ ಯೋಜನೆ ಅತ್ಯುತ್ತಮ ಯೋಜನೆಯಾಗಿದ್ದು ಈ ಭಾಗದ ಎಲ್ಲಾ ಗರ್ಭಿಣಿ ಬಾಣಂತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರಲ್ಲದೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ ಮಾತೃಪೂರ್ಣ ಯೋಜನೆಯ ಮಾಹಿತಿ ನೀಡಿ ಮಹಿಳೆಯರು ಗರ್ಭವತಿಯಾಗಿರುವಾಗಲೇ ಮತ್ತು ಹೆರಿಗೆ ಸಮಯದಲ್ಲಿ ಶಿಶು ಮರಣ ಗರ್ಭಿಣಿ ಬಾಣಂತಿಯರ ಮರಣ ತಡೆಗಟ್ಟುವುದು, ರಕ್ತದ ಒತ್ತಡ ಕಡಿಮೆ ಮಾಡುವುದು, ಕಡಿಮೆ ತೂಕವುಳ್ಳ ಮಕ್ಕಳ ಜನನ ಸಮಸ್ಯೆ ಹಾಗೂ ಜನನ ನಂತರ ಬಾಣಂತಿಯರ ಹಾಗೂ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಗರ್ಭಿಣಿ ಬಾಣಂತಿಯರು ಅಂಗನವಾಡಿ ಕೇಂದ್ರದಲ್ಲಿ ಹಾಜರಿದ್ದು ಮಧ್ಯಾಹ್ನದ ಪೌಷ್ಟಿಕ ಆಹಾರ, ಬಿಸಿಯೂಟವನ್ನು ಸೇವಿಸುವುದರೊಂದಿಗೆ ಹಾಲು, ಮೊಟ್ಟೆ, ಸೇವಿಸಿ ತಮ್ಮ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಎಲ್ಲಾ ಗರ್ಭಿಣಿ ಬಾಣಂತಿಯರಿಗೆ ಮಾಹಿತಿಯನ್ನು ನೀಡಲಾಗಿದ್ದು ಪ್ರತೀ ದಿನ ಅಂಗನವಾಡಿಗೆ ಬಂದು ಆಹಾರ ಸೇವಿಸಿ ಕೊಡುವಂತೆ ವಿನಂತಿಸಿಕೊಳ್ಳಲಾಗಿದೆ ಎಂದರು.
ನೂಜಿಬಾಳ್ತಿಲ ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ, ಪಂ.ಸದಸ್ಯರಾದ ಕೆ.ಜೆ ತೋಮಸ್, ರಜಿತಾ ಪದ್ಮನಾಭ, ವಲ್ಸ ಕೆ.ಜೆ, ಬೆಥನಿ ಪ.ಪೂಪು ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ, ಮಾಜಿ ಅಧ್ಯಕ್ಷ ಅಂಜೇರಿ ಜೋಸ್, ಸ್ತ್ರೀಶಕ್ತಿ ಮಹಿಳೆಯರಾದ ಲೀಲಾವತಿ ಅರಿಮಜಲು, ವಿಮಲ ಬೇರಿಕೆ, ಶೋಭಾ ದೋಂತಿಲಡ್ಕ, ಹೇಮಾವತಿ ಕಲ್ಲುಗುಡ್ಡೆ, ಪ್ರೇಮ ಜಾಲು, ಸೀತಾಕ್ಷಿ, ನವ್ಯಾ ಪೆಲತ್ತಡಿ, ವಿಜೇತ ಸಾಂತ್ಯಡ್ಕ, ಸುಂದರಿ ದೋಂತಿಲಡ್ಕ, ಗುಲಾಬಿ ಪಾಡ್ಲ, ಹೊನ್ನಮ್ಮ ಜಾಲು, ಸೂಸಮ್ಮ ಪಾಡ್ಲ, ಚಂದ್ರಾವತಿ ಜಾಲು, ಪದ್ಮಾವತಿ ಪಾಲೆತ್ತಡಿ, ಅಂಗಾರು ದೋಂತಿಲಡ್ಕ, ಅಂಗನವಾಡಿ ಪುಟಾಣಿಗಳ ಪೋಷಕರು, ಪುಟಾಣಿಗಳು ಉಪಸ್ಥಿತರಿದ್ದರು. ಕಲ್ಲುಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ ಸ್ವಾಗತಿಸಿ, ವಂದಿಸಿದರು. ಪಾರ್ವತಿ ಸಹಕರಿಸಿದರು.