(ನ್ಯೂಸ್ ಕಡಬ) newskadaba.com ಉಡುಪಿ ನ. 13: ಸರಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಚ್ಚಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಸಂಬಂಧಪಟ್ಟ ಇಲಾಖೆ ಪ್ರಾಧಿಕಾರಗಳಿಂದ ಅಧಿಕೃತ ಪರವಾನಿಗೆಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು. ಸುಡುಮದ್ದು ಮಾರಾಟ ಮಾಡುವ ಮಳಿಗೆಯ ಸುತ್ತಮುತ್ತ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡಬೇಕು ಹಾಗೂ ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.ಪಟಾಕಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ವರೆಗೆ ಮಾತ್ರ ಮಾರಾಟ ಮಾಡಬೇಕು.ಮಳಿಗೆಗಳಲ್ಲಿ ವಿದ್ಯುತ್ ವಯರಿಂಗ್ ಪೈಪ್ ಮೂಲಕ ಅಳವಡಿಸಬೇಕು. ಅಲಂಕಾರಿಕ ವಿದ್ಯುತ್ ಸೀರಿಯಲ್ ಸೆಟ್‌ಗಳನ್ನು ಹಾಕಬಾರದು.
ಮಳಿಗೆಗಳಲ್ಲಿ ಅಡುಗೆ ಮಾಡುವುದಾಗಲೀ, ಗ್ಯಾಸ್, ಕ್ಯಾಂಡಲ್ ಮತ್ತು ಅಗರ್‌ಬತ್ತಿಗಳನ್ನು ಉರಿಸುವುದಾಗಲೀ ಮಾಡಬಾರದು. ಪರವಾನಿಗೆ ಅವಧಿ ಮುಗಿದ ನಂತರ ಉಳಿದಿರುವ ಸುಡುಮದ್ದುಗಳನ್ನು ಮನೆಗೆ ಕೊಂಡೊಯ್ಯದೇ ಅವುಗಳನ್ನು ಅಧಿಕೃತ ಸಗಟು ಮಾರಾಟಗಾರರಿಗೆ ಹಿಂದಿರುಗಿಸಬೇಕು ಎಂದು ತಿಳಿಸಲಾಗಿದೆ.ಈ ನಿಯಮಗಳನ್ನು ಮೀರಿದವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿಯ ಡಿ,ಸಿ ಜಗದೀಶ್ ಅವರು ತಿಳಿಸಿದ್ದಾರೆ.