(ನ್ಯೂಸ್ ಕಡಬ) newskadaba.com ಕಾವೂರು ನ. 10 : ಕೇರಳ ಮೂಲದ ಉದ್ಯಮಿ ಕಾವೂರು ಮಲ್ಲಿ ಲೇಔಟ್‌ನ ಸುರೇಂದ್ರನ್ (60) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ನಿವಾಸಿಗಳಾದ ಸಂತೋಷ್ ಮತ್ತು ಸಿದ್ದು ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಕೇರಳ ಮೂಲದ ಸುರೇಂದ್ರನ್ ಅವರನ್ನು ನವೆಂಬರ್ 03 ರಂದು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಇರಿದು ಹತ್ಯೆ ಮಾಡಿದ ಘಟನೆ ನಗರದ ಕಾವೂರಿನಲ್ಲಿ ನಡೆದಿತ್ತು. ಫಾರ್ಮ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಮಧ್ಯಾಹ್ನ 1 ಗಂಟೆ ವೇಳೆಗೆ ಸುರೇಂದ್ರನ್ ಅವರು ಮನೆಗೆ ಮರಳಿ ಬಂದಿದ್ದು, ಆ ಬಳಿಕ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ಧಾರೆ.