ಕಡಬ: ಮಾತೃಪೂರ್ಣ ಯೋಜನೆಗೆ ಚಾಲನೆ ► ತಲೆಗೆ ಹೂ ಮುಡಿಸಿ, ಕೈಗೆ ಬಳೆತೊಡಿಸಿ, ಹಣೆಗೆ ಕುಂಕುಮ ಇಟ್ಟು ಗರ್ಭಿಣಿ- ಭಾಣಂತಿಯರಿಗೆ ಗೌರವ

(ನ್ಯೂಸ್ ಕಡಬ) newskadaba.com ಕಡಬ,ಅ.3. ಕರ್ನಾಟಕ ಸರ್ಕಾರವು ಜಾರಿಗೆ ತಂದ ಮಾತೃಪೂರ್ಣ ಯೋಜನೆಯ ಉದ್ಘಾಟನೆಯು ಸೋಮವಾರ ಕಡಬ ಚರ್ಚು ಅಂಗನವಾಡಿಯಲ್ಲಿ ನಡೆಯಿತು.

ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಾತೃಪೂರ್ಣ ಯೋಜನೆಯು ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ರೂಪಿಸಿರುವ ಉತ್ತಮ ಯೋಜನೆಯಾಗಿದೆ ಈ ಯೋಜನೆ ನಮ್ಮ ದ.ಕ.ಹಾಗೂ ಉಡುಪಿ ಜಿಲ್ಲೆಗೆ ಔಚಿತ್ಯವಾಲ್ಲವಾದರೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸರಿಯಾಗಿ ದೊರಕುವುದಿಲ್ಲ ಇದನ್ನು ಗಮನದಲ್ಲಿಟ್ಟು ಸರ್ಕಾರ ಯೋಜನೆ ರೂಪಿಸಿದೆ. ಇಂತಹ ಉತ್ತಮ ಯೋಜನೆ ರೂಪಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಡಬ ವಲಯ ಮೇಲ್ವಿಚಾರಕಿ ಹೇಮರಾಮದಾಸ್ ಮಾತೃಪೂರ್ಣ ಯೋಜನೆಯ ಮಾಹಿತಿ ನೀಡಿ ತಾಲೂಕಿನಲ್ಲಿ 4530 ಗರ್ಭಿಣಿ, ಹಾಗೂ ಬಾಣಂತಿಯರು ಇದ್ದು ಕಡಬ ವಲಯದಲ್ಲಿ 312 ಗರ್ಭಿಣಿ ಹಾಗೂ ಬಾಣಂತಿಯರಿದ್ದಾರೆ. ಮಾತೃಪೂರ್ಣ ಯೋಜನೆಯಿಂದ ಹೆರಿಗೆ ಸಮಯದಲ್ಲಿ ತಾಯಂದಿರ ಮತ್ತು ಶಿಶುಗಳ ಮರಣ ತಡೆಗಟ್ಟುವುದು ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ರಕ್ತಹೀನತೆ ಕಡಿಮೆಗೊಳಿಸುವುದು. ಮಕ್ಕಳ ನಿರ್ಜೀವ ಜನನ ಮತ್ತು ಕಡಿಮೆ ತೂಕದ ಮಗುವಿನ ಜನನದ ಸಮಸ್ಯೆಯನ್ನು ದೃಷ್ಟಿಯಲ್ಲಿರಿಸಿ ಯೋಜನೆ ರೂಪಿಸಿದೆ. ನಮ್ಮ ಭಾಗಕ್ಕೆ ಯೋಜನೆ ನಿರುಪಯುಕ್ತ ಎಂಬ ವಾದ ಇದೆ. ಆದರೆ ಮುಂದಿನ ದಿನಗಳಲ್ಲಿ ಇಲಾಖೆ ಯೋಜನೆಯ ಸಾಧಕ-ಭಾದಕ ಅರಿತು ಸೂಕ್ತ ವ್ಯವಸ್ಥೆ ಕಲ್ಪಿಸಲಿದ್ದು ಈ ಯೋಜನೆಯನ್ನು ನಾವೆಲ್ಲರೂ ಯಶ್ವಸಿಗೊಳಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಡಬ ವಲಯದ ಮೇಲ್ವಿಚಾರಕಿ ಹೇಮಾ ರಾಮದಾಸ್ ಮಾತನಾಡಿ ವಾರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಅನ್ನ ಸಾಂಬಾರು ಮೊಟ್ಟೆ, ಹಾಲು ನೀಡಿದರೆ ಮಂಗಳವಾರ ಮತ್ತು ಗುರುವಾರ ಗಂಜಿ ಚಟ್ನಿ ಮೊಟ್ಟೆ ಹಾಗೂ ಹಾಲು ನೀಡಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ ಶುಭಹಾರೈಸಿದರು.


ಮುಖ್ಯ ಅತಿಥಿಯಾದ ತಾ.ಪಂ. ಸದಸ್ಯ ಪಝಲ್ ಕೋಡಿಂಬಾಳ, ಕಡಬ ಗ್ರಾ.ಪಂ.ಸದಸ್ಯ ಅಶ್ರಫ್ ಶೇಡಿಗುಂಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ.ಸದಸ್ಯೆ ಜಯಂತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಕಾರ್ಯದರ್ಶಿ ಭುವನೇಂದ್ರ ಮರ್ದಾಳ, ಆರೋಗ್ಯ ಇಲಾಖೆಯ ಎಲ್. ಎಚ್. ವಿ. ತ್ರೆಸಿಯಮ್ಮ ಉಪಸ್ಥಿತರಿದ್ದರು. ಕಡಬ ಬಾಲವಿಕಾಶ ಸಮಿತಿ ಅಧ್ಯಕ್ಷೆ ಶಾಲಿನಿ ಸತೀಶ್ ನಾೖಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ನಳಿನಿ ರೈ ವಂದಿಸಿದರು. ಗರ್ಭಿಣಿ ಹಾಗೂ ಭಾಣಂತಿಯರಿಗೆ ತಲೆಗೆ ಹೂ ಮುಡಿದು ಕೈಗೆ ಬಳೆತೊಟ್ಟು ಹಣೆಗೆ ಕುಂಕುಮ ಹಚ್ಚಿ ಗೌರವಿಸಲಾಯಿತು. ಬಳಿಕ ಮಾತೃಪೂರ್ಣ ಯೋಜನೆಯ ಬಿಸಿಯೂಟ ನೀಡಲಾಯಿತು.

error: Content is protected !!

Join the Group

Join WhatsApp Group