(ನ್ಯೂಸ್ ಕಡಬ) newskadaba.com ಕಡಬ,ಸೆ.29. ನೂಜಿಬಾಳ್ತಿಲ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ನೂಜಿಬಾಳ್ತಿಲ ಗ್ರಾಮವನ್ನು ಮದ್ಯಮುಕ್ತ ಗ್ರಾ.ಪಂಚಾಯತನ್ನಾಗಿ ಘೋಷಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ನೂಜಿಬಾಳ್ತ್ತಿಲ ರೆಂಜಿಲಾಡಿ ಒಕ್ಕೂಟ ಮುಂದಾಳತ್ವದಲ್ಲಿ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ದೇವಸ್ಥಾನಗಳು, ದೈವಸ್ಥಾನಗಳು, ಚರ್ಚ್, ಮಸೀದಿ ಮದರಸ, ಪ್ರಾರ್ಥನಾ ಮಂದಿರ ಭಜನಾ ಮಂದಿರ ಧರ್ಮಶಿಖರ ಗುರು ಮಂದಿರ, ಜೈನ ಬಸದಿ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳು, ಅಂಗನವಾಡಿ ಬಾಲವಿಕಾಸ ಸಮಿತಿ ವತಿಯಿಂದ ನೂಜಿಬಾಳ್ತಿಲ ಗ್ರಾ.ಪಂ.ಗೆ ಮನವಿ ಮಾಡಿ ಗ್ರಾಮವನ್ನು ಸಂಪೂರ್ಣ ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಬೇಕೆಂದು ಮನವಿ ನೀಡಲಾಗಿದ್ದು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ತಿರ್ಮಾನ ಕೈಗೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲು ಸಾಮಾನ್ಯ ಸಭೆಯಲ್ಲಿ ತಿರ್ಮಾನಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೆಂಜಿಲಾಡಿ ಸೇವಾ ಪ್ರತಿನಿಧಿ ಕರುಣಾಕರ, ಕಡಬ ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ಚಂದ್ರಶೇಖರ ಹಳೆನೂಜಿ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕೆ.ಪಿ., ತಾಲೂಕು ದಲಿತ ಮುಖಂಡರಾದ ಗುರುವಪ್ಪ ಕಲ್ಲುಗುಡ್ಡೆ, ಸುಂದರಿ ಕಲ್ಲುಗುಡ್ಡೆ, ಗ್ರಾ.ಪಂ ಮಾಜಿ ಅಧ್ಯಕ್ಷ ವಸಂತ ಪೂಜಾರಿ, ಮಾಜಿ ಉಪಾಧ್ಯಕ್ಷೆ ಸುಶೀಲ ಕಲ್ಲುಗುಡ್ಡೆ, ನೂಜಿಬಾಳ್ತಿಲ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮೋನಪ್ಪ ಗೌಡ ಅರಿಮಜಲು, ಉಪಾಧ್ಯಕ್ಷೆ ಕಮಾಲಾಕ್ಷಿ ಬರೆಮೇಲು, ಗ್ರಾ.ಪಂ. ಮಾಜಿ ಸದಸ್ಯ ಶ್ರೀಧರ ಗೌಡ ಮಿತ್ತೋಡಿ, ಶೋಭಾ ದೋಂತಿಲಡ್ಕ, ಪ್ರೇಮ ಎಳುವಾಲೆ, ಅಂಗಾರ ಕಲ್ಲುಗುಡ್ಡೆ, ಓಮರ ಕಲ್ಲುಗುಡ್ಡೆ, ಅಣ್ಣು ದೋಂತಿಲಡ್ಕ, ಅನಿತಾ ನಾರಾಯಣ ಕಂಪ, ನೀಲಯ್ಯ, ಗೌಡ ಪೂಜಾರಿ ಮನೆ, ಹರೀಶ್ ಅಡೆಂಜ, ರಘುರಾಜ್ ಕೆರ್ನಡ್ಕ, ವಸಂತ ಕಲ್ಲುಗುಡ್ಡೆ, ಸಂತೋಪ್ ಕಲ್ಲುಗುಡ್ಡೆ, ಮೊದಲಾದವರ ನೇತೃತ್ವದಲ್ಲಿ ಇಲ್ಲಿಯ ಶ್ರೀ ಕ್ಷೇತ್ರ ಧ,ಗ್ರಾ,ಯೋಜನೆ ನೂಜಿಬಾಳ್ತಿಲ-ರೆಂಜಿಲಾಡಿ ಒಕ್ಕೂಟಗಳು, ದಲಿತ ಸಂಘಟನೆ, ನೂರುಲ್ ಹುದಾ ಮಸೀದಿ ಮತ್ತು ಮದರಸ ಸಮಿತಿ, ನೂಜಿಶ್ರೀ ಉಳ್ಳಾಲ್ತಿ ಕ್ಷೇತ್ರ, ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ, ಓರಂಬಾಳು ಶ್ರೀ ಉಮಾಮಹೇಶ್ವರಿ ದೇವಸ್ಥಾನ, ಇಚ್ಲಂಪಾಡಿ ಅನಂತಪದ್ಮನಾಭ ಬಸದಿ, ಕನ್ವಾರೆ ಶ್ರೀ ರಾಜನ್ ದೈವಸ್ಥಾನ, ಕುರಿಯಾಳ ಕೊಪ್ಪ ಶ್ರೀ ಲಕ್ಷೀ ಜರ್ನಾಧನ ದೇವಸ್ಥಾನ, ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರ, ಗೋಳಿಯಡ್ಕ ಕಟ್ಟತ್ತಡ್ಕ ಗುರುಮಂದಿರ ಸೇರಿದಂತೆ ವಿವಿಧ ಚರ್ಚುಗಳ ಆಡಳಿತ ಮಂಡಳಿಯವರು ಒಟ್ಟು ಸೇರಿ ಯಾವುದೇ ಕಾರಣಕ್ಕೂ ನೂಜಿಬಾಳ್ತಿಲ ರೆಂಜಿಲಾಡಿಯಲ್ಲಿ ಮಾರಾಟಕ್ಕೆ ಅವಕಾಶ ನೀಡದೆ ನಮ್ಮ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಬೇಕಾಗಿ ಮನವಿ ಮಾಡಿದಲ್ಲದೆ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮನವಿಗೆ ಸ್ಪಂದಿಸಿ ಮಾತನಾಡಿದ ಅಧ್ಯಕ್ಷ ಸದಾನಂದ ಗೌಡರವರು ಗ್ರಾಮಸ್ಥರ ಬೇಡಿಕೆಗೆ ನಮ್ಮ ಆದ್ಯತೆ ಯಾವಾಗಲು ಇದೆ. ಸಭೆಯಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದರು.
ನಮ್ಮ ತ್ಯಾಜ್ಯ ನಮ್ಮ ಹೊಣೆ ಸುತ್ತೋಲೆಯನ್ನು ಪಿಡಿಓ ಸಭೆಯಲ್ಲಿ ಓದಿದಂತೆ ಮಾತಾಡಿದ ಸದಸ್ಯ ರಾಜು ಗೋಳಿಯಡ್ಕರವರು ಕೆಲವು ಹೋಟೆಲ್ ಅಂಗಡಿ, ಮುಂಗಟ್ಟುಗಳನ್ನು ತ್ಯಾಜ್ಯ ಬೇಕಾಬಿಟ್ಟಿ ಹಾಕುವುದಲ್ಲದೆ ಹೋಟೆಲ್ನ ಕೊಳಚೆ ನೀರಿನ ವ್ಯವಸ್ಥೆ ಸರಿಯಾಗಿ ನಿರ್ವಹಿಸಿಲ್ಲ ಈ ಬಗ್ಗೆ ಆರೋಗ್ಯ ಸಹಾಯಕಿಯರು ಆಶಾ ಕಾರ್ಯಕರ್ತೆಯರು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತಾನಾಡಿದ ರಜಿತಾ ಪದ್ಮನಾಭ, ಕೆ.ಜೆ. ವಲ್ಸರವರು ಎಲ್ಲಾ ಸದಸ್ಯರು ತ್ಯಾಜ್ಯದ ಬಗ್ಗೆ ಮಾಹಿತಿ ನೀಡಿ ಸಿಕ್ಕಸಿಕ್ಕಾಲ್ಲಿ ಕಸ ಹಾಕದಂತೆ ಸೂಚಿಸಬೇಕು ಆದರೆ ಆಶಾ ಕಾರ್ಯಕರ್ತೆಯರು ಆರೋಗ್ಯ ಸಹಾಯಕಿಯರು ಹೇಳಿದನ್ನು ಕೇಳುತ್ತಿಲ್ಲ ಎಲ್ಲರೂ ಒಟ್ಟಾಗಿ ಕ್ರಮಕ್ಕೆ ಮುಂದಾಗುವ ಎಂದು ಸಲಹೆ ನೀಡಿದರು. ಈ ಬಗ್ಗೆ ಕೆ.ಜೆ ತೋಮಸ್, ಹರೀಶ್ ಎನ್., ರಾಮಚಂದ್ರ ಒಟ್ಟಾಗಿ ಸ್ವಚ್ಛತೆಗೆ ಕ್ರಮ ಕೈಗೊಂಡಲ್ಲಿ ಸಂಪೂರ್ಣ ಸ್ವಚ್ಛತೆ ಕಾರ್ಯಕ್ರಮ ಮಾಡಬಹುದು ಎಂದರು. ಪಿಡಿಓ ಸರಕಾರದ ಸುತ್ತೋಲೆಯನ್ನು ಓದಿ ಅ.2ರಿಂದ 15ರವರೆಗೆ ಸಂಪೂರ್ಣ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಾ.ಪಂ.ನಲ್ಲಿ ಅ.2ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಇಲ್ಲಿಯ ಸ್ವಚ್ಛತೆಗೆ ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ಸಹಕಾರ ಇದ್ದು ಶುಕ್ರವಾರದಿಂದ ಕಡಬ ಪ.ಪೂ.ಕಾಲೇಜಿನ ಎನ್ಎಸ್ಎಸ್ ವಾರ್ಷಕ ಶಿಬಿರ ನಡೆಸುತ್ತಿದ್ದು ಅವರು ಸಹಕಾರ ನೀಡಲಿದ್ದಾರೆ ಆ ದಿನ ಎಲ್ಲಾ ಜನಪ್ರತಿನಿಧಿಗಳು ಶಾಲಾ ಕಾಲೇಜಿನವರು, ಗ್ರಾ.ಪಂ.ನವರು ಅಂಗನವಾಡಿಯವರು ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಬೇಕೆಂದರು. ಈಗಾಗಲೇ ಪ್ಲಾಸ್ಟಿಕ್ ಮತ್ತು ಬ್ಯಾನರ್ ಮುಕ್ತ ಗ್ರಾಮವನ್ನಾಗಿಸಿದ್ದು ಗ್ರಾ.ಪಂ.ನಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ನಾವು ಎಷ್ಟೇ ಕಟ್ಟುನಿಟ್ಟಾಗಿ ಸೂಚಿಸಿದರು ಕೆಲವು ಅಂಗಡಿ,ಹೋಟೆಲ್, ಗೂಡಂಗಡಿ ಸ್ವಚ್ಛತೆಗೆ ದಕ್ಕೆ ಬರುವಂತೆ ಗಲೀಜು ಮಾಡುತ್ತವೆ. ಈ ಬಗ್ಗೆ ಈಗಾಗಲೇ ಪಿಡಿಓ ಹಾಗೂ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಯಾವುದೇ ಮುಲಾಜಿಲ್ಲದೇ ನೇರವಾಗಿ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಈ ಬಾರಿ ಗಾಂಧಿಪುರಸ್ಕಾರ ನಮ್ಮ ಗ್ರಾ.ಪಂಗೆ ಸಿಗಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದರು.
ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಚಲಿಸುವ ಗೂಡಂಗಡಿಗೆ ಮಾತ್ರ ಅವಕಾಶವಿದ್ದು ಯಾವುದೇ ಇತರ ಗೂಡಂಗಡಿಗಳಿಗೆ ಪರವಾನಿಗೆ ನೀಡದಿರಲು ತಿರ್ಮಾನಿಸಲಾಯಿತು. ಪೇರಡ್ಕ- ಮರ್ಧಾಳ ರಾಜ್ಯ ಹೆದ್ದಾರಿ ಬದಿಯಲ್ಲಿ ಈಗಾಗಲೇ ಹಲವಾರು ಗೂಡಂಗಡಿ ಇಡಲಾಗಿದ್ದು ಈ ಬಗ್ಗೆ ರೆಂಜಿಲಾಡಿಯ ಪೇರಡ್ಕ, ಸಾಂತೋಮ್ ಚರ್ಚಿನ ಆಡಳಿತ ಮಂಡಲೀ ಹಾಗೂ ಸಾಂತೋಮ್ ವಿದ್ಯಾನೀಕೆತನದ ಮುಖ್ಯಗುರುಗಳಿಂದ ಗ್ರಾ,ಪಂ ಬಂದ ದೂರಿನಂತೆ ಸಭೆಯಲ್ಲಿ ಸದಸ್ಯರು ಚರ್ಚಿಸಿ ಹಿಂದಕ್ಕೆ ಯಾವುದೇ ರೀತಿಯಲ್ಲಿ ಪರವಾನಿಗೆ ನೀಡಲಾಗುವುದಿಲ್ಲ ಎಂದು ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ತಿಳಿಸಿದರಲ್ಲದೆ ನಾಲ್ಕು ಚಕ್ರದ ಚಲಿಸುವ ಗೂಡಂಗಡಿಯಲ್ಲಿ ವ್ಯವಹರಿಸುವರೇ ನಿಂತಲ್ಲಿ ನಿಲ್ಲದೆ ಚಲಿಸುವ ಮುಖಾಂತರ ವ್ಯಾಪಾರ ಮಾಡುತ್ತಿದ್ದಾರೆ ಅಂತಹ ಗೂಡಂಗಡಿಗಳಿಗೆ ಮಾತ್ರ ಪರಿಶೀಲಿಸಿ ಪರವಾನಿಗೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಬಗ್ಗೆ ಸಲಹೆ ಸೂಚನೆ ನೀಡಿದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ರವರು ರಾಜ್ಯ ಹೆದ್ದಾರಿ ಬದಿಯಲ್ಲಿ ಇಟ್ಟಿರುವ ಗೂಡಂಗಡಿ ಬಗ್ಗೆ ಪಿಡಬ್ಲುಡಿ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಅಂಗನವಾಡಿಗಳಲ್ಲಿ ಮಾತೃಪೂರ್ಣ ಯೋಜನೆ ಸರಕಾರ ಅ.2ರಿಂದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಹಾಗೂ ಭಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ಮಾತೃಪೂರ್ಣ ಯೋಜನೆ ಜಾರಿಗೊಳಿಸಿದ್ದು ಅಂಗನವಾಡಿಗಳಲ್ಲಿ ಇದನ್ನು ಅನುಷ್ಠಾನಗೊಳಿಸಬೇಕೆಂದು ಅಧ್ಯಕ್ಷ ಸದಾನಂದ ಗೌಡ ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಅಂಗನವಾಡಿ ಕಾರ್ಯಕರ್ತೆ ರಾಜೀವಿ ರೈ, ಸಭೆಗೆ ಮಾಹಿತಿ ನೀಡಿ ಮಾತೃಪೂರ್ಣ ಯೋಜನೆ ಬಗ್ಗೆ ಸದಸ್ಯರಾದ ವಲ್ಸ ಕೆ.ಜೆ. ವಿಷಯ ಪ್ರಸ್ತಾಪಿಸಿ ಯೋಜನೆ ಏನೋ ಉತ್ತಮವಾಗಿದೆ. ಆದರೆ ಅಂಗನವಾಡಿಗೆ 2,3, ಕಿ.ಮೀ, ದೂರದಿಂದ ಮಧ್ಯಾಹ್ನದ ಸುಡುಬೀಸಿಲಿಗೆ ಬರಲು ಹೇಗೆ ಸಾಧ್ಯ ಈಗಾಗಲೇ ಹಲವಾರು ಗರ್ಭಿಣಿ ಭಾಣಂತಿಯರು ತಮ್ಮ ನೋವನ್ನು ಹೇಳಿಕೊಂಡಿದ್ದು ಮೊದಲಿನಂತೆ ನಮ್ಮ ಮನೆಗೆ ಸೌಲಭ್ಯ ನೀಡಿದರೆ ಹೆಚ್ಚಿನ ಪ್ರಯೋಜನವಾದೀತು ಎಂದರು. ಇದಕ್ಕೆ ಪ್ರತಿಕ್ರೀಯಿದ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್ ದ.ಕ. ಜಿಲ್ಲೆಯಲ್ಲಿ ಈ ರೀತಿ ಅಂಗನವಾಡಿ ಕೇಂದ್ರದಿಂದ ದೂರ ಇರುವುದು ಸಹಜವಾಗಿದ್ದರು ಸರಕಾರ ಗರ್ಭಿಣಿ ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ಅಂಗನವಾಡಿಯಲ್ಲಿ ಬಂದು ಆಹಾರ ಸೇವಿಸಬೇಕೆಂದು ಯೋಜನೆ ತರಲಾಗಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ಕಲ್ಲುಗುಡ್ಡೆ ಪೇಟೆ ಸೇರಿದಂತೆ ದೇವಸ್ಥಾನ, ದೈವಸ್ಥಾನ, ಚರ್ಚು, ಮಸೀದಿ ಮಂದಿರಗಳು ಬಳಿಯಲ್ಲಿ ಸೋಲಾರ್ ಲೈಟ್ ಅಳವಡಿಸುವುದಲ್ಲದೆ ಕಲ್ಲುಗುಡ್ಡೆ ಪೇಟೆಯಾದ್ಯಂತ ದಾರಿದೀಪ ಅಳವಡಿಸುವಂತೆ ಸದಸ್ಯರು ಆಗ್ರಹಿಸಿದ್ದು ಈ ಬಗ್ಗೆ ಉತ್ತರಿಸಿದ ಅಧ್ಯಕ್ಷ ಸದಾನಂದ ಗೌಡ ಹೆಚ್ಚಿನ ಕಡೆಗಳಲ್ಲಿ ಈಗಾಗಲೇ ಸೋಲಾರ್ ಹಾಗೂ ದಾರಿದೀಪ ಅಳವಡಿಸಿದ್ದು ಇಲ್ಲದ ಸ್ಥಳದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಜಾನಕಿ ಕಲ್ಲುಗುಡ್ಡೆ, ಅಮ್ಮಣಿ ಜೋಸೆಫ್, ಪುಷ್ಪಲತಾ ಪೇರಡ್ಕ, ಪಿ.ಯು.ಸ್ಕರಿಯ, ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೋಂಡರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ ಸ್ವಾಗತಿಸಿ, ವರದಿ ಹಾಗೂ ಸುತ್ತೋಲೆಗಳನ್ನು ವಾಚಿಸಿ ವಂದಿಸಿದರು.