(ನ್ಯೂಸ್ ಕಡಬ) newskadaba.com ಹಾಸನ, ಅ.24: ನಾಗರಹೊಳೆ ಉದ್ಯಾನವನದಂಚಿನ ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ಗ್ರಾಮವೊಂದರ ಮನೆಯಲ್ಲಿ ವನ್ಯಪ್ರಾಣಿ ಮಾಂಸದ ಅಡುಗೆ ತಯಾರಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಅರಣ್ಯ ಸಿಬ್ಬಂದಿಗಳು ಒಂದು ಜಿಂಕೆ ಕೊಂಬು ಮತ್ತು ಮಾಂಸವನ್ನು ವಶಕ್ಕೆ ಪಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ. ನಾಗರಹೊಳೆ ಉದ್ಯಾನವನದಂಚಿನ ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ಗ್ರಾಮದ ಅಶೋಕ್ ಕುಮಾರ್ ತಲೆ ಮರೆಸಿಕೊಂಡಿದ್ದು, ಪತ್ತೆಗೆ ತಂಡ ರಚಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ಉದ್ಯಾನದ ಹುಲಿ ಯೋಜನೆ ನಿರ್ದೇಶಕ ಡಿ. ಮಹೇಶ್ ಕುಮಾರ್ ಹಾಗೂ ಎ.ಸಿ.ಎಫ್. ಸತೀಶ್ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಗಳ ತಂಡವು ಅಶೋಕ್ ಕುಮಾರ್ ಮನೆ ಮೇಲೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಜಿಂಕೆ ಮಾಂಸದ ಅಡುಗೆ ತಯಾರಿಸುತ್ತಿದ್ದರು. ಮನೆ ಬಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಅಶೋಕ್ ಕುಮಾರ್ ಪರಾರಿಯಾಗಿದ್ದಾರೆ. ಅಡುಗೆ ಮಾಡಲು ಬಳಸಿದ್ದ ಪಾತ್ರೆ ಸಹಿತ ಬೇಯಿಸಿದ್ದ ಮಾಂಸ ಹಾಗೂ ಒಂದು ಜೊತೆ ಜಿಂಕೆ ಕೊಂಬು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.