(ನ್ಯೂಸ್ ಕಡಬ) newskadaba.com ಮಂಗಳೂರು, ಅ.20: ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಮಂಗಳಾದೇವಿಗೆ ಸಂಚರಿಸುವ 27 ನಂಬರ್ ನ ಗಣೇಶ್ ಪ್ರಸಾದ್ ಬಸ್ ನಲ್ಲಿ ಡ್ರಗ್ಸ್ ಜಾಗೃತಿ ಬರಹ ಬರೆದು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಹೊಸ ಪ್ರಯತ್ನ ಮಾಡಲಾಗಿದೆ. “ಯುವರ್ ಲೈಫ್ ಇಸ್ ಇನ್ ಯುವರ್ ಹ್ಯಾಂಡ್”, ” ಸೆ ನೋ ಟು ಡ್ರಗ್ಸ್” ಎಂಬಿತ್ಯಾದಿ ಜಾಗೃತಿ ಬರಹಗಳನ್ನು ಬಸ್ ನಲ್ಲಿ ಬರೆದಿರುವುದು ಗಮನ ಸೆಳೆದಿದೆ.
ಪ್ರಜ್ಞಾವಂತರ ನಗರಿ ಮಂಗಳೂರಿನಲ್ಲೂ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಅವರು ಪ್ರತಿಕ್ರಿಯಿಸಿ, ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕಿದ್ದ ನಮ್ಮ ಯುವ ಜನತೆ ಡ್ರಗ್ಸ್ ನಂತಹ ಮಾದಕ ವಸ್ತುಗಳ ದಾಸರಾಗುತ್ತಿರುವುದು ದುರಂತ. ಈ ನಿಟ್ಟಿನಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಅನಿವಾರ್ಯವೆನಿಸಿದೆ. ನಮ್ಮ ಸಿಟಿ ಬಸ್ ಕೇವಲ ಜನರ ಪ್ರಯಾಣಕ್ಕೆ ಮಾತ್ರವಲ್ಲ, ಜನಜಾಗೃತಿ ಮೂಡಿಸುವ ಒಂದು ಮಾಧ್ಯಮ ಕೂಡ ಹೌದು! ಈ ದೃಷ್ಟಿಯಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಒಂದು ಪ್ರಯತ್ನ ಎಂದಿದ್ದಾರೆ.