(ನ್ಯೂಸ್ ಕಡಬ) newskadaba.com ಮುಂಬೈ,ಸೆ.21. ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬ ಆಘಾತಕಾರಿ ಸತ್ಯ ಸಹೋದರ ಇಕ್ಬಾಲ್ ಕಸ್ಕರ್ ಬಾಯ್ಬಿಟ್ಟಿದ್ದಾನೆ.
ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‍ನನ್ನು 8 ದಿನಗಳ ಕಾಲ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನ ವಿಚಾರಣೆ ವೇಳೆ ಹಲವಾರು ಸಂಗತಿಗಳು ಬಹಿರಂಗಗೊಂಡಿದೆ. ಡಿ ಕಂಪೆನಿ ಮುಖ್ಯಸ್ಥನಾದ ದಾವೂದ್ ಪಶ್ಚಿಮ ಮತ್ತು ಪೂರ್ವ ಆಫ್ರಿಕಾ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದಾನೆಂದು ತಿಳಿಸಿದ್ದಾನೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ದಾವೂದ್ ಪಾಕಿಸ್ತಾನದಲ್ಲಿ 4 ಬಾರಿ ತನ್ನ ವಿಳಾಸವನ್ನ ಬದಲಾಯಿಸಿದ್ದಾನೆ ಎಂದು ಕಸ್ಕರ್ ವಿಚಾರಣೆ ವೇಳೆ ಹೇಳಿದ್ದಾನೆ. ಪಾಕಿಸ್ತಾನದಲ್ಲಿ ದಾವೂದ್ ತನ್ನ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದ್ದಾನೆ ಹಾಗೂ ತನ್ನ ಕುಟುಂಬ ಸದಸ್ಯರೊಂದಿಗಿನ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ ಎಂದು ಹೇಳಿದ್ದಾನೆ.
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಕರ್, ಹತ್ತಿರದ ಸಂಬಂಧಿ ಮುಮ್ತಾಜ್ ಈಜಾಝ್ ಶೇಕ್ ಹಾಗೂ ಮತ್ತೊಬ್ಬ ಸಹಚರ ಇಸ್ರಾರ್ ಜಮೀಲ್ ಸಯ್ಯದ್‍ನನ್ನು ಥಾಣೆ ಪೊಲೀಸ್‍ನ ಆ್ಯಂಟಿ ಎಕ್ಟಾರ್ಷನ್ ಸೆಲ್ ಬಂಧಿಸಿದೆ. 2013ರಿಂದ ಸುಲಿಗೆ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಮೂವರನ್ನೂ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿ ಮತ್ತಷ್ಟು ವಿಚಾರಣೆ ನಡೆಯುತ್ತಿದೆ.
ಕಸ್ಕರ್ ಹಾಗೂ ಆತನ ಸಹಚರರು 2013ರಿಂದಲೂ ದಾವೂದ್ ಹೆಸರಿನಲ್ಲಿ ಥಾಣೆಯ ಪ್ರಮುಖ ಬಿಲ್ಡರ್‍ವೊಬ್ಬರನ್ನ ಬೆದರಿಸಿ 30 ಲಕ್ಷ ರೂ. ಹಾಗೂ ನಾಲ್ಕು ಫ್ಲಾಟ್‍ಗಳನ್ನ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.