(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.19: ತಾಲೂಕಿನ ವಿವಿಧ ಕಡೆಗಳಲ್ಲಿ ಸ್ಕೂಟರ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೇ 5ರಂದು ಉಜಿರೆ ಗ್ರಾಮದ ವಂದನಾ ಭಂಡರ್ಕಾರ್ (40) ಎಂಬವರ ಸ್ಕೂಟರ್ ಕಾಣೆಯಾಗಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು. ತದನಂತರ ಉಜಿರೆ ಗ್ರಾಮದ ಪಂಚರಿಕಾಡು ರಬ್ಬರ್ ತೋಟದಲ್ಲಿ ಮೂರು ಮಂದಿ ಸ್ಕೂಟರ್‌ನ ಬಿಡಿಭಾಗಗಳನ್ನು ಕಳಚುತ್ತಿರುವ ವಿಚಾರದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತ ಆರೋಪಿಗಳನ್ನು ಉಜಿರೆ ಗ್ರಾಮದ ಹಳೆಪೇಟೆ ನಿವಾಸಿ ಅರುಣ್ ಶೆಟ್ಟಿ (30), ಬೆಳ್ತಂಗಡಿ ಕನ್ಯಾಡಿ ಗ್ರಾಮದ ಗುರಿಪಳ್ಳ ಹೇಮಂತ್ ಬಿರ್ವ ಯಾನೆ ಹರ್ಷಿತ್ (20), ಉಜಿರೆ ಗ್ರಾಮದ ಸಂಪತ್ ಯಾನೆ ಶ್ಯಾಮ್ (24) ಎಂದು ಗುರುತಿಸಲಾಗಿದೆ.
ವಿಚಾರಣೆ ನಡೆಸಿದ್ದ ಸಂದರ್ಭ ಸತ್ಯ ಒಪ್ಪಿಕೊಂಡ ಆರೋಪಿಗಳು, ಉಜಿರೆಯ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಸೇರಿದಂತೆ ಎರಡು ಸ್ಕೂಟರ್‌ಗಳನ್ನು ಕಳ್ಳತನ ಮಾಡಿ ಅದರ ಬಿಡಿಭಾಗಗಳನ್ನು ಕಳಚಿ ಮಾರಾಟ ಮಾಡಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ.ಹಾಗೂ ಬೆಳ್ತಂಗಡಿ ಪಿಎಸ್‌ಐ ನಂದಕುಮಾರ್ ನೇತೃತ್ವದಲ್ಲಿ ಎಎಸ್‌ಐ ದೇವಪ್ಪ, ಎಎಸ್‌ಐ ತಿಲಕ್, ಪಿಸಿಗಳಾದ ಪುಟ್ಟಸ್ವಾಮಪ್ಪ, ಚರಣ್‌ರಾಜ್, ವೆಂಕಟೇಶ್, ಅಶೋಕ್ ಪಾಲ್ಗೊಂಡಿದ್ದರು.