(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.11: ಭಟ್ಕಳ ಸಮುದ್ರತೀರದಿಂದ 17 ನಾಟಿಕಲ್ ಮೈಲಿ ದೂರದಲ್ಲಿ ಸಮುದ್ರದಲ್ಲಿ ಸಿಲುಕಿದ್ದ ಬೋಟ್ ನ 24 ಮೀನುಗಾರರನ್ನು ಶುಕ್ರವಾರ ರಕ್ಷಣೆ ಮಾಡಲಾಗಿದೆ. ಕರಾವಳಿ ಕಾವಲು ಪಡೆಯ ಕಸ್ತೂರಬಾ ಗಾಂಧಿ ಹಡಗಿನ ಮೂಲಕ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಎಲ್ಲರನ್ನು ಸುರಕ್ಷಿತವಾಗಿ ಭಟ್ಕಳ ಸಮುದ್ರ ತೀರಕ್ಕೆ ಕರೆತಂದಿದ್ದಾರೆ.
ಮೀನುಗಾರಿಕೆಗೆ ತೆರಳಿದ್ದ ಖಮರುಲ್ ಬಹಾರ್ ಹೆಸರಿನ ಬೋಟ್, ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಸಿಲುಕಿತ್ತು. ಬೋಟ್ ಮಾಲೀಕರು ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಿ, ರಕ್ಷಣೆಗೆ ಮನವಿ ಮಾಡಿದ್ದರು. ಈ ಬಗ್ಗೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು, ಕರಾವಳಿ ಕಾವಲು ಪಡೆಗೆ ಮಾಹಿತಿ ರವಾನಿಸಿದ್ದರು. ಸಮುದ್ರದಲ್ಲಿ ಗಸ್ತಿನಲ್ಲಿದ್ದ ಕಸ್ತೂರಬಾ ಗಾಂಧಿ ಹಡಗು ಕೂಡಲೇ ಬೋಟ್ ಇರುವಲ್ಲಿ ತೆರಳಿ, ಮೀನುಗಾರರು ಹಾಗೂ ಬೋಟ್ ಅನ್ನು ದಡಕ್ಕೆ ಸೇರಿಸಿದರು.