(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.18, ಮಾಜಿ ಸಚಿವ ಖಮರುಲ್ ಇಸ್ಲಾಂ(69) ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದರು.
1974ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ ಇವರು ಕಲುಬುರಗಿ ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, 3 ಬಾರಿ ಮುಸ್ಲಿಂ ಲೀಗ್‌ನಿಂದ ಹಾಗೂ 3 ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೂರು ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಅವರನ್ನು ಸಂಪುಟ ಪುನಾರಚನೆ ವೇಳೆ ಸಂಪುಟದಿಂದ ಕೈಬಿಡಲಾಗಿತ್ತು. ಕೃಷ್ಣ ಸಂಪುಟದಲ್ಲಿ ಕಾರ್ಮಿಕ, ವಸತಿ ಖಾತೆ ನಿರ್ವಹಿಸಿದ್ದ ಅವರು ಸಿದ್ದು ಸಂಪುಟದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ವಕ್ಫ್ ಖಾತೆ ಸಚಿವರಾಗಿದ್ದರು.
ಸೋಮವಾರ ಸಂಜೆ ತವರೂರು ಕಲುಬುರಗಿಗೆ ಖಮರುಲ್ ಇಸ್ಲಾಂ ಅವರ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತದೆ ಎಂದು ತಿಳಿದು ಬಂದಿದೆ.