(ನ್ಯೂಸ್ ಕಡಬ) newskadaba.com ಸುಳ್ಯ, ಆ. 31. ಮೆದುಳಿನ ಸಮಸ್ಯೆ ಬಾಧಿಸಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ಪುಷ್ಪಾವತಿ ಎಂಬವರ ಮಗ ನವೀನ್ ಗೆ ಶೀಘ್ರವಾಗಿ ಚಿಕಿತ್ಸೆ ಒದಗಿಸುವ ಅಗತ್ಯವಿದ್ದುದ್ದರಿಂದ ಬಡತನದಲ್ಲಿದ್ದ ಇವರಿಗೆ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈ ಕಾರಣದಿಂದ ಜಾಲತಾಣಗಳಲ್ಲಿ ಚಿಕಿತ್ಸೆಗೆ “ಸಹಾಯ ಹಸ್ತ ” ದಾನಿಗಳು ನೆರವು ನೀಡುವಂತೆ ಮನವಿ ಮಾಡಲಾಗಿತ್ತು. ಕೇವಲ ಹತ್ತು ದಿನಗಳ ಕಾಲಾವಧಿಯಲ್ಲಿ ಚಿಕಿತ್ಸೆಗೆ ಬೇಕಾದ ಹಣವು ತಾಯಿಯ ಖಾತೆಗೆ ಹರಿದು ಬಂದಿತ್ತು.
ಸಹೃದಯಿ ದಾನಿಗಳಿಂದ ಸುಮಾರು ರೂ. 2,80,951/- ಹಣ ಹರಿದು ಬಂದಿದ್ದರಿಂದ ನವೀನ್ ಚಿಕಿತ್ಸೆಯನ್ನ ಯಶಸ್ವಿಯಾಗಿ ನಡೆಸಲಾಯಿತು. ಇದರಲ್ಲಿ ಅದೆಷ್ಟೋ ಕಾಣದ ಕೈಗಳು ಸಹಾಯವನ್ನು ಮಾಡಿದ್ದು, ಇವರೆಲ್ಲ ಸಹಕಾರದಿಂದ ನವೀನ್ ನ ಆರೋಗ್ಯದಲ್ಲಿ ಚೇತರಿಕೆ ಕಂಡು ಮನೆಗೆ ಬಂದಿರುತ್ತಾನೆ. ತನ್ನ ಮಗುವಿನ ಜೀವ ಉಳಿಸಿಕೊಳ್ಳಲು ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳು ಮತ್ತು ದಾನಿಗಳು,ಸಂಘಟಕರು, ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನವೀನ್ ನ ತಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.