(ನ್ಯೂಸ್ ಕಡಬ) newskadaba.com ಕಡಬ, ಆ.10.ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಧಾರಾಕಾರ ಮಳೆ¸ಸೋಮವಾರ ಸ್ವಲ್ಪ ಬಿಡುವು ನೀಡಿದೆ. ಹವಾಮಾನ ಇಲಾಖೆ ಸೋಮವಾರ ಬೆಳಗ್ಗಿನ ತನಕ ಭಾರಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿತ್ತು.
ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನೇತ್ರಾವತಿ ನದಿ ನೀರು ನಿನ್ನೆಯಿಂದ ಇಳಿಮುಖಂಡಿದೆ. ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ನೀರಿನ ಹರಿವು ಹೊಂದಿಕೊಂಡು ನೇತ್ರಾವತಿ ನದಿಯ ಹರಿವು ಬಂಟ್ವಾಳದಲ್ಲಿ ಏರಿಳಿತವಾಗುತ್ತದೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ. ಉಪ್ಪಿನಂಗಡಿಯಲ್ಲಿ ಹರಿಯುವ ಕುಮಾರಧಾರಾ ಮತ್ತು ನೇತ್ರಾವತಿ ನದಿಯ ಜಲಮಟ್ಟ ನಿನ್ನೆ ಸಂಜೆಯ ಹೊತ್ತಿಗೆ 23 ಮೀಟರ್ಗೆ ಇಳಿಕೆಯಾಗಿದೆ.
ಕಡಬ, ಬೆಳ್ತಂಗಡಿ, ಕಿನ್ನಿಗೋಳಿ, ಬಂಟ್ವಾಳ, ಮೊದಲಾದ ಕಡೆ ಮಳೆಯಿಂದಾಗಿ ಮೊನ್ನೆಯಿಂದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಇಂದಿನಿಂದ ಮತ್ತೆ ಜನರ ಓಡಾಟ ಎಂದಿನಂತೆ ಗೋಚರಿಸಿದೆ.
ಆದರೆ. ಆ.12ರ ತನಕವೂ ಉತ್ತಮ ಮಳೆ ಮುಂದುವರಿಯಲಿದೆ. ಅಪಾಯದಂಚಿನಲ್ಲಿರುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಾಕೃತಿಕ ವಿಕೋಪ ಎದುರಿಸಲು ಎನ್ಡಿಆರ್ಎಫ್, ಗೃಹರಕ್ಷಕ ದಳ, ಅಗ್ನಿಶಾಮಕದಳ 24*7 ಸನ್ನದ್ಧವಾಗಿದೆ. ಕಂದಾಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ತಕ್ಷಣ ಸ್ಪಂದಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.