(ನ್ಯೂಸ್ ಕಡಬ) newskadaba.com.ಮಂಗಳೂರು,ಆ.4: ದೇಶದ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಿದ ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ಕೊಂಕಣಿಗರಿಗೆ ಒಂದನೇ ತರಗತಿಯಿಂದಲೇ ಮಾತೃಭಾಷೆ ಕಲಿಯಲು ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲು ವಿಶ್ವ ಕೊಂಕಣಿ ಕೇಂದ್ರ ನಿರ್ಧರಿಸಿದೆ.
ಈ ಬಗ್ಗೆ ನಗರದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಮಾತನಾಡಿ, ರಾಜ್ಯದಲ್ಲಿ ಅಲ್ಪಸಂಖ್ಯಾಕ ಭಾಷೆಯಾಗಿರುವ ಕೊಂಕಣಿಯನ್ನು ಶಾಲೆಗಳಲ್ಲಿ ತೃತೀಯ ಐಚ್ಛಿಕ ಭಾಷೆ ಯಾಗಿ ಕಲಿಸಲು ರಾಜ್ಯ ಸರಕಾರ ಈಗಾಗಲೇ ಅನುಮತಿ ನೀಡಿದೆ. ಹಾಗಾಗಿ ಹೊಸ ಶಿಕ್ಷಣ ನೀತಿಯಲ್ಲಿ 1ರಿಂದ ಕೊಂಕಣಿ ಕಲಿಯಲು ಅವಕಾಶ ಮಾಡಿಕೊಡಬೇಕು ಎಂದರು.
ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಶಿಕ್ಷಣ ವಿಭಾಗದ ಸಂಯೋಜಕ, ರಾಜ್ಯ ಸರಕಾರದ ಕೊಂಕಣಿ ಪಠ್ಯಪುಸ್ತಕಗಳ ಸಮಿತಿಯ ಅಧ್ಯಕ್ಷ ಪ್ರೊ| ಡಾ| ಕಸ್ತೂರಿ ಮೋಹನ ಪೈ ಅವರು ನೂತನ ನೀತಿಯ ಸ್ವರೂಪ ಹಾಗೂ ನಡೆಯಲಿರುವ ಬದಲಾವಣೆಗಳ ಕುರಿತು ತಿಳಿಸಿದರು.