(ನ್ಯೂಸ್ ಕಡಬ) newskadaba.com ಮಂಗಳೂರು: ಜು.30., ಐದು ರಫೇಲ್ ಯುದ್ಧ ವಿಮಾನ ಹರಿಯಾಣದ ಅಂಬಾಲ ವಾಯುನೆಲೆಗೆ ಬುಧವಾರ ಬಂದಿಳಿದಿದೆ.ಈ ವಿಮಾನಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ.
ಬರೋಬ್ಬರಿ ಏಳು ಸಾವಿರ ಕಿಲೋ ಮೀಟರ್ ದೂರದ ಫ್ರಾನ್ಸ್ ರಾಷ್ಟ್ರದಿಂದ ಭಾರತಕ್ಕೆ ಹಾರಾಟ ಮಾಡಿಕೊಂಡು ಬಂದಿರುವ 5 ರಫೇಲ್ ವಿಮಾನಗಳ ಪೈಕಿ ಒಂದು ವಿಮಾನದ ಪೈಲಟ್ ವಿಂಗ್ ಕಮಾಂಡರ್ ಅರುಣ್ ಕುಮಾರ್ (35) ಕರ್ನಾಟಕದಲ್ಲಿ ವಿದ್ಯಾಭ್ಯಾಸ ನಡೆಸಿದವರು ಆಗಿದ್ದಾರೆ. ಅವರಿಗೆ ಶಿಕ್ಷಕರಾಗಿದ್ದವರಲ್ಲಿ ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನವರು ಎನ್ನುವುದು ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಅರುಣ್ ಕುಮಾರ್ ಬಿಹಾರ ಮೂಲದವರಾಗಿದ್ದು, ವಿಜಯ ಪುರದ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ. ತಂದೆ ಬೆಂಗಳೂರಿನಲ್ಲಿ ವಾಯು ಸೇನೆಯಲ್ಲಿದ್ದ ಸಂದರ್ಭ ಅರುಣ್ ಕುಮಾರ್ ಸೈನ್ಯಕ್ಕೆ ಸೇರಲು ವಿಜಯಪುರ ಸೈನಿಕ ಶಾಲೆಯಲ್ಲಿ ಪ್ರವೇಶ ಪಡೆದಿದ್ದರು.
1995ರಲ್ಲಿ 6ನೇ ತರಗತಿಗೆ ಸೈನಿಕ ಶಾಲೆಗೆ ಸೇರ್ಪಡೆಗೊಂಡಿದ್ದ ಅವರು 1999ರಲ್ಲಿ ಎಸೆಸೆಲ್ಸಿ ಪೂರ್ತಿಗೊಳಿಸಿ ಆ ಬಳಿಕ ಯುಪಿ ಎಸ್‌ಸಿ, ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದಾರೆ.
ಅರುಣ್ ಕುಮಾರ್‌ಗೆ 11, 12ನೇ ತರಗತಿಗಳಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪಾಠ ಮಾಡಿದ್ದ ಉಪನ್ಯಾಸಕರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಗುತ್ತಿಗಾರಿನ ದಾಮೋದರ್. ತನ್ನ ಶಿಷ್ಯನೊಬ್ಬ ವಿಂಗ್ ಕಮಾಂಡರ್ ಆಗಿ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್ ಹಾರಾಟ ಮಾಡುವಷ್ಟು ಎತ್ತರಕ್ಕೆ ಬೆಳೆದಿರುವುದು ಅವರಿಗೆ ಬಹಳಷ್ಟು ಖುಷಿ ನೀಡಿದೆ.
ಅರುಣ್ ಕುಮಾರ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ. ಭಾಷಣ, ನಾಟಕ ಮತ್ತಿತರ ಸ್ಪರ್ಧೆಗಳಲ್ಲಿ, ಫುಟ್ಬಾಲ್ ಹಾಗೂ ಇತರ ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದ. ಇದೆಲ್ಲವೂ ಆತನಿಗೆ ರಕ್ಷಣ ಇಲಾಖೆಗೆ ಸೇರ್ಪಡೆಗೊಳ್ಳಲು ಸಹಾಯಕವಾಯಿತು ಎಂದು ತಮ್ಮ ಶಿಷ್ಯನ ಗುಣಗಾನವನ್ನು ದಾಮೋದರ್ ಮಾಡಿದ್ದಾರೆ.