(ನ್ಯೂಸ್ ಕಡಬ) newskadaba.com ಉಡುಪಿ, ಜು.24:ಕೊರೋನಾ ವೈರಸ್ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ ಗುರುವಾರ ಬೆಳಗಿನ ಜಾವ 3 ಗಂಟೆಗೆ ರಿಕ್ಷಾ ಚಲಾಯಿಸಿಕೊಂಡು ಹೋಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿ, ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.
ಪೆರ್ಣಂಕಿಲ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿರುವ ರಾಜೀವಿ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ, ಗರ್ಭಿಣಿಗೆ ಬೆಳಗ್ಗೆ 3 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮನೆಯವರು ಕರೆ ಮಾಡಿ ವಿಷಯ ತಿಳಿಸಿದಾಗ ತಕ್ಷಣ ಸ್ಪಂದಿಸಿದ ರಾಜೀವಿ ತಮ್ಮ ರಿಕ್ಷಾವನ್ನು ಸ್ವತಃ ಚಲಾಯಿಸಿಕೊಂಡು 20 ಕಿ.ಮೀ ದೂರದ ಉಡುಪಿಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯದಿಂದಿದ್ದಾರೆ. ಮೂಲತ ಸುಳ್ಯದವರಾದ ರಾಜೀವಿ ವಿವಾಹದ ಬಳಿಕ ಪೆರ್ಣಂಕಿಲದಲ್ಲಿ ವಾಸವಾಗಿದ್ದಾರೆ. ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಲಸಗಳಲ್ಲಿ ಸಕ್ರಿಯರಾಗಿರುವ ಇವರು 2 ಆಟೋ ಖರೀದಿಸಿ, ಒಂದನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಹೆರಿಗೆಗೆ ಹೋಗುವ ಗರ್ಭಿಣಿಯರಿಗೆ ಉಚಿತ ಪ್ರಯಾಣ ಕಲ್ಪಿಸುತ್ತಿದ್ದಾರೆ. ಹೀಗೆ ಕರ್ತವ್ಯ ಜತೆಗೆ ಸಮಾಜಸೇವೆ ನಡೆಸುತ್ತಿರುವ ರಾಜೀವಿ ಅವರ ಕಾರ್ಯ ಸಾಮಾಜಿಕ ಜಾಲತಾಣದಲ್ಲೂ ಶ್ಲಾಘನೆಗೆ ಪಾತ್ರವಾಗಿದೆ.