(ನ್ಯೂಸ್ ಕಡಬ) newskadaba.com , ಜು.21: ಕೊರೊನಾ ಹಿನ್ನೆಲೆ ಕರಾವಳಿಯಲ್ಲಿ ಜು 25 ಶನಿವಾರದಂದು ನಡೆಯುವ ನಾಗರಪಂಚಮಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ನಾಗಪಂಚಮಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿಲ್ಲ.
ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಸಾಂಕೇತಿಕವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟಮಿ, ಚೌತಿ ಸೇರಿದಂತೆ ವರಮಹಾಲಕ್ಷ್ಮೀ ಹಬ್ಬಗಳ ಸಾರ್ವಜನಿಕ ಆಚರಣೆಯನ್ನು ಕೂಡಾ ನಿಷೇಧ ಮಾಡಲಾಗಿದ್ದು, ಸಾರ್ವಜನಿಕರು ತಮ್ಮ ಮನೆಮಟ್ಟಿಗೆ ಸೀಮಿತಗೊಳಿಸಿ ಹಬ್ಬಗಳನ್ನು ಆಚರಿಸಿ ಎಂದು ಹೇಳಿದ್ದಾರೆ.