(ನ್ಯೂಸ್ ಕಡಬ) newskadaba.com ಬೆಂಗಳೂರು , ಜು.21: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಿಸದಿರಲು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣದ ಉಸ್ತುವಾರಿ ಸಚಿವರೊಂದಿಗೆ ಸಿಎಂ ಅವರು ಸೋಮವಾರ ಮ್ಯಾರಾಥಾನ್ ಸಭೆ ನಡೆಸಿದರು. ಪ್ರತಿ ವಲಯದ ಪರಿಸ್ಥಿತಿ,ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗಳ ನಿರ್ವಹಣೆಗೆ ಖುದ್ದಾಗಿ ಮುತುವರ್ಜಿ ವಹಿಸಲಾಗಿದೆ ಎಂದು ಸಚಿವರುಗಳೂ ಮಾಹಿತಿ ನೀಡಿದರು. ಆಗ ಲಾಕ್‌ಡೌನ್ ವಿಸ್ತರಣೆ ಮಾಡದಿರುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಲಾಕ್‌ಡೌನ್ ವಿಸ್ತರಣೆ ಆಗುವುದಿಲ್ಲವೆಂದು ಸಭೆ ಬಳಿಕ ಮಾತನಾಡಿದ ಸಚಿವರಾದ ವಿ.ಸೋಮಣ್ಣ ಹಾಗೂ ಡಾ.ಕೆ.ಸುಧಾಕರ್ ಖಚಿತ ಪಡಿಸಿದರು. ಲಾಕ್‌ಡೌನ್ ವಿಸ್ತರಣೆ ಆಗುವುದಿಲ್ಲವೆಂಬ ಕಾರಣಕ್ಕೆ ಲಕ್ಷ್ಮಣ ರೇಖೆ ದಾಟಲು ಅವಕಾಶ ಇರುವುದಿಲ್ಲ. ನೈಟ್ ಕರ್ಫ್ಯೂ, ಇದರ ನಿರ್ಬಂಧಗಳೇನು ಎನ್ನುವ ಬಗೆಗಿನ ಮಾರ್ಗಸೂಚಿ ಮಂಗಳವಾರ ಪ್ರಕಟವಾಗಲಿದೆ ಎಂದು ಡಾ.ಸುಧಾಕರ್ ತಿಳಿಸಿದರು. ಬೆಂಗಳೂರು ನಗರದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ವಲಯವಾರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬುಧವಾರ, ಗುರುವಾರದಂದು ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.