(ನ್ಯೂಸ್ ಕಡಬ) newskadaba.com ಮಂಗಳೂರು :ಜು.20., ಹದಿನೈದು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಮಾಜಿ ಕೇಂದ್ರ ಸಚಿವರಾದ ಬಿ. ಜನಾರ್ಧನ ಪೂಜಾರಿ ಅವರು ಗುಣಮುಖರಾಗಿ ಸೋಮವಾರ ಮನೆಗೆ ತೆರಳಿದ್ದರು.
ಹಲವು ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 83 ವರ್ಷದ ಜನಾರ್ಧನ ಪೂಜಾರಿಯವರಿಗೆ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಜು 5 ಶನಿವಾರ ಕೋವಿಡ್ ತಪಾಸಣೆ ನಡೆಸಿದಾಗ ಜನಾರ್ದನ ಪೂಜಾರಿಯವರ ವರದಿ ಪಾಸಿಟಿವ್ ಬಂದಿತ್ತು . ಬಳಿಕ ಅವರ ಪತ್ನಿಗೂ ಸೋಂಕು ತಗುಲಿತ್ತು ಎಂದು ತಿಳಿದುಬಂದಿತ್ತು .ಇದು ಅವರ ಅಪಾರ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು. ಅಭಿಮಾನಿಗಳು ಹಾಗೂ ಹಿತೈಷಿಗಳು ಅವರು ಶೀಘ್ರವಾಗಿ ಗುಣಮುಖರಾಗಿ ಬರಲೆಂದು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿಯಾಗಿರುವ ಮಾಜಿ ಸಚಿವರ ಮನೆಯ ಕೆಲಸದಾಕೆಯ ಕಾರಣದಿಂದ ಸೋಂಕು ಬಂದಿತ್ತು ಎಂದು ಹೇಳಲಾಗಿತ್ತು. ಮಾಜಿ ಸಚಿವರು ಮತ್ತು ಅವರ ಪತ್ನಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನಲೆಯಲ್ಲಿ ರವಿವಾರ ಅವರ ಗಂಟಲ ಸ್ರಾವದ ಪರೀಕ್ಷೆ ನಡೆಸಲಾಗಿತ್ತು. ಸೋಮವಾರ ಅವರ ವರದಿ ನೆಗೆಟಿವ್ ಬಂದಿದೆ.
ಕೊರೋನಾ ರೋಗಕ್ಕೆ ಯಾರೂ ಭಯಪಡಬೇಕಾಗಿಲ್ಲ. ಪ್ರತೀಯೊಬ್ಬರು ಆತ್ಮಸ್ಥೈರ್ಯ ವನ್ನು ಬೆಳೆಸಿಕೊಳ್ಳಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಉತ್ತಮ ಪೌಷ್ಟಿಕ ಆಹಾರ ಸೇವಿಸಿ.
ಪ್ರತೀಯೊಬ್ಬರು ಜಾಗ್ರತೆ ವಹಿಸಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು . ಇದರಿಂದ ಕೊರೊನಾದಂತಹ ಮಹಾಮಾರಿಯನ್ನು ನಿಗ್ರಹಿಸಲು ಸಾಧ್ಯ ಎಂದು ಸಾರ್ವಜನಿಕರಿಗೆ ಜನಾರ್ಧನ ಪೂಜಾರಿಯವರು ಕಿವಿ ಮಾತು ಕೂಡ ಹೇಳಿದ್ದಾರೆ.