ಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದ ರಾಮಮಂದಿರ ನಿರ್ಮಾಣ ➤ ಉಡುಪಿ ಪೇಜಾವರ ಶ್ರೀ

(ನ್ಯೂಸ್ ಕಡಬ) newskadaba.com ಉಡುಪಿ:ಜು.19., ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್ ನ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾದರು.


ಈ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಹತ್ವದ ವಿಷಯಗಳು ಚರ್ಚೆಯಾಗಿದ್ದು, ಅಂದಾಜು 300 ಕೋಟಿ ರುಪಾಯಿ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣದ ಕುರಿತು ತೀರ್ಮಾನ‌ ಕೈಗೊಳ್ಳಲಾಗಿದೆ.


ಈ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕೆ ಭೂಮಿಯ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಯಲಿದ್ದು, ಎಲ್ ಆಂಡ್ ಟಿ‌ ಕಂಪನಿ ಮೂಲಕ ನಿರ್ಮಾಣ ಕಾರ್ಯ ಆಗಲಿದೆ ಎಂದರು.
ಸುಮಾರು 200 ಅಡಿ ಆಳದಲ್ಲಿ ಭೂಮಿಯ ಸಾಮರ್ಥ್ಯ ಅಧ್ಯಯನ ಆಗುತ್ತಿದ್ದು, 200 ಅಡಿ ಆಳದಲ್ಲಿ ತಾಮ್ರ ಪತ್ರ ಇರಿಸಲು ತೀರ್ಮಾನ ಮಾಡಲಾಗಿದೆ. ತಾಮ್ರ ಪತ್ರದಲ್ಲಿ ಬರೆಯಬೇಕಾದ ವಿವರದ ಕುರಿತು ಇಂದು ಚರ್ಚೆ ನಡೆದಿದೆ. ಸುಮಾರು ಮುನ್ನೂರು ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಎಪ್ಪತ್ತು ಎಕರೆ ಪರಿಸರ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಅವಶ್ಯಕತೆ ಇದೆ. ಬೇರೆ ಬೇರೆ ಕಂಪನಿಗಳ ಸಿಎಸ್ ಆರ್ ಫಂಡ್ ಮೂಲಕ ಹಣ ಸಂಗ್ರಹ ಮಾಡಲಾಗುತ್ತಿದೆ. ಜೊತೆಗೆ ರಾಮಭಕ್ತರ ಪಾಲ್ಗೊಳ್ಳುವಿಕೆ ಮೂಲಕ ಹಣ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ ಎಂದು ಶ್ರೀಗಳು ಪ್ರತಿಕ್ರಿಯೆ ನೀಡಿದರು.

error: Content is protected !!

Join the Group

Join WhatsApp Group