ಸ್ಮಾರ್ಟ್‍ಸಿಟಿ ಫಲಪ್ರದ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ನಝೀರ್

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.18    ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು, ಇನ್ನಷ್ಟು ಯೋಜನೆಗಳು ಅನುಷ್ಠಾನ ಹಾಗೂ ಕಾಮಗಾರಿಯ ಹಂತದಲ್ಲಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್ ಹೇಳಿದರು. ಅವರು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದ ಬಗ್ಗೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 45 ಯೋಜನೆಗಳಿದ್ದು ಅದರಲ್ಲಿ 13 ಪಾನ್ ಸಿಟಿ ಯೋಜನೆಗಳಾಗಿದ್ದು, 32 ಪ್ರದೇಶ ಅಭಿವೃದ್ಧಿ ಯೋಜನೆಗಳಾಗಿವೆ.  ಈಗಾಗಲೇ 8 ವಾರ್ಡ್ ಗಳು ಆಯ್ಕೆಯಾಗಿದ್ದು  1628 ಎಕರೆ ವಿಸ್ತೀರ್ಣದಲ್ಲಿ ಒಟ್ಟು 2000.72 ಕೋಟಿ ರೂ. ಪ್ರಗತಿ ಕಾರ್ಯ ನಡೆಯುತ್ತಿದೆ ಎಂದರು. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರದೇಶ ಆಧಾರಿತ  ಅಭಿವೃದ್ಧಿಯ ಮೂಲಕ ನಗರಾಭಿವೃದ್ಧಿ, ಮರು ಸುಧಾರಣೆ, ಹಸಿರು ಪ್ರದೇಶದ ಅಭಿವೃದ್ಧಿ ಈ ರೀತಿ ವಿಂಗಡಿಸುವ ಮೂಲಕ  ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಪಾನ್ ಸಿಟಿ ಉತ್ತೇಜನ ಈ ಮೂಲಕ ಮಾಹಿತಿ ತಂತ್ರಜ್ಞಾನ ಅಳವಡಿಕೆ ಜೊತೆಗೆ ನಗರದ ಮೂಲ ಸೌಕರ್ಯ ಸೇವೆಗಳನ್ನು ಒದಗಿಸಲಾಗಿದೆ ಎಂದರು. ಈಗಾಗಲೇ  ಈ ಯೋಜನೆಯ ಅನ್ವಯ 1.91 ಕೋಟಿ ರೂ. ವೆಚ್ಚದಲ್ಲಿ ಎಲ್.ಇ.ಡಿ. ಲೈಟ್ ಆಳವಡಿಸಲಾಗಿದೆ. 0.75 ಕೋಟಿ ರೂ ವೆಚ್ಚದಲ್ಲಿ ಹಂಪನಕಟ್ಟೆಯ ಕ್ಲಾಕ್ ಟವರ್ ನಿರ್ಮಾಣಗೊಂಡಿದೆ.  6.16 ಕೋಟಿ ರೂ ವೆಚ್ಚದಲ್ಲಿ ನೆಹರೂ ಮೈದಾನದಿಂದ ಹಂಪನಕಟ್ಟೆ ಕ್ಲಾಕ್ ಟವರ್, ಎ.ಬಿ. ಶೆಟ್ಟಿ ವೃತ್ತದವರೆಗೆ ಸ್ಮಾರ್ಟ್ ರಸ್ತೆ, 5.00ಕೋಟಿ ರೂ ವೆಚ್ಚದಲ್ಲಿ  ಝೋನ್4ರಲ್ಲಿ ಒಳಚರಂಡಿ ಕಾಮಗಾರಿ, 1.50ಕೋಟಿ. ರೂ. ವೆಚ್ಚದಲ್ಲಿ ಸ್ಮಾರ್ಟ್ ಬಸ್, ಇ ಟಾಯ್ಲಟ್ (ಪಾನ್ ಸಿಟಿ ಪ್ರಥಮ ಹಂತದ) ಹಾಗೂ 3.50ಕೋಟಿ ರೂ. ವೆಚ್ಚದಲ್ಲಿ ಎರಡನೆ ಹಂತದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ರೀತಿಯಾಗಿ ಒಟ್ಟು 18  ಕಾಮಗಾರಿಗಳು 477.68 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
24.94ಕೋ. ರೂ ವೆಚ್ಚದಲ್ಲಿ ಅಂತರಾಷ್ಟ್ರೀಯ ಈಜುಕೊಳ, 12.00ಕೋ. ರೂ ವೆಚ್ಚದಲ್ಲಿ ಕದ್ರಿಪಾರ್ಕ್ ಸುತ್ತಮುತ್ತಲಿನ ಪ್ರದೇಶ ಅಭಿವೃದ್ದಿ, 5.00ಕೋ. ರೂ ವೆಚ್ಚದಲ್ಲಿ ಕಮಾಂಡ್ ಕಂಟ್ರೋಲ್ ಬಿಲ್ಡಿಂಗ್, 4.75ಕೋ. ರೂ ವೆಚ್ಚದಲ್ಲಿ ಕೌಶಲ್ಯ ಅಭಿವೃದ್ಧಿ ಹಾಗೂ ಸುರಕ್ಷಿತ ತರಬೇತಿ ಸೆಂಟರ್, 5.00ಕೋ. ರೂ. ವೆಚ್ಚ ಸೇರಿದಂತೆ ಒಟ್ಟು 10 ಪ್ರಗತಿ ಕಾಮಗಾರಿಗಳಿಗೆ 77.76 ಕೋ. ರೂ ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ. 935.01 ಕೋಟಿ ರೂ ವೆಚ್ಚದಲ್ಲಿ ಡಿ.ಪಿ.ಆರ್ ಹಂತದಲ್ಲಿ 11 ಪ್ರಗತಿ ಕಾರ್ಯಗಳು ನಡೆಯುತ್ತಿದೆ ಎಂದು ನಝೀರ್ ಹೇಳಿದರು. ಮಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಯ ದೃಷ್ಠಿಯಿಂದ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನಗರದಲ್ಲಿರುವ ಒಳಚರಂಡಿ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ವಾಹನಗಳ ದಟ್ಟನೆ, ನೀರಿನ ಸಮಸ್ಯೆ, ರಸ್ತೆ ನಿರ್ಮಾಣ, ಪ್ಲೈ ಓವರ್ ಸಮಸ್ಯೆಗಳ ಬಗ್ಗೆ ಸಭೆಗೆ ತಿಳಿಸಿ, ತ್ವರಿತ ಕ್ರಮಕ್ಕೆ ಒತ್ತಾಯಿಸಿದರು. ಸಭೆಯಲ್ಲಿ ಸ್ಮಾರ್ಟ್‍ಸಿಟಿ ಅಧಿಕಾರಿಗಳು, ಇಂಜೀನಿಯರ್ ಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Also Read  ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹಿನ್ನೆಲೆ ➤ ಇಂದು ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ

Nk Kukke

error: Content is protected !!
Scroll to Top