ಆರ್ಥಿಕ ಗಣತಿಗೆ ನಿಖರ ಮಾಹಿತಿ ನೀಡಲು ಮನವಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.15    ಆರ್ಥಿಕ ಗಣತಿಯು ಜಿಲ್ಲೆಯ ಭೌಗೋಳಿಕ ಗಡಿಯೊಳಗೆ ನೆಲೆಗೊಂಡಿರುವ ಎಲ್ಲಾ ಉದ್ಯಮಗಳ/ ಘಟಕಗಳ ಪೂರ್ಣಗಣತಿ ಮಾಡುವುದಾಗಿದೆ. ಈ ಗಣತಿಯ ಮೂಲಕ ಜಿಲ್ಲೆಯ ಒಟ್ಟು ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿನ ಕೃಷಿ ಹಾಗೂ ಕೃಷಿಯೇತರ ವಿವಿಧ ಉದ್ಯಮಗಳಲ್ಲಿ ತೊಡಗಿಸಿರುವ ಆರ್ಥಿಕ ಚಟುವಟಿಕೆಗಳಲ್ಲಿನ ಹಣಕಾಸು ಹಂಚಿಕೆ, ಉದ್ಯೋಗಾವಕಾಶ, ವರಮಾನ, ಉತ್ಪಾದನೆ ಮುಂತಾದ ವಿವರಗಳನ್ನು ತಿಳಿಯಬಹುದಾಗಿದೆ. ಇದರಿಂದಾಗಿ ಆರ್ಥಿಕ ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಗುರುತಿಸಬಹುದಾಗಿದ್ದು ರಾಜ್ಯದ ಆಂತರಿಕ ಉತ್ಪಾದನೆಯಂತಾದ ಮುಖ್ಯವಾದ ಅಂಶಗಳನ್ನು ಕಂಡುಹಿಡಿಯಲು ಪ್ರಮುಖ ಸಾಧನವಾಗಿ ಉಪಯೋಗಿಸಲಾಗುತ್ತದೆ.

ಆರ್ಥಿಕ ಗಣತಿಯ ಮೂಲಕ ಲಭ್ಯವಾಗುವ ಮಾಹಿತಿಗಳು ವಿವಿಧ ಅಭಿವೃದ್ಧಿ ಕಾರ್ಯಕ್ರಗಳನ್ನು ರೂಪಿಸಲು, ಯೋಜನೆ ಸಿದ್ದಪಡಿಸಲು ಸರಕಾರಕ್ಕೆ ಮೂಲ ಅಂಕಿ ಅಂಶವಾಗಿರುತ್ತದೆ. ಈ ಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು, ಯೋಜನೆಗಳನ್ನು ರೂಪಿಸುವ ಉದ್ದೇಶಕ್ಕೆ ಮತ್ತು ಆರ್ಥಿಕ ಗಣತಿಯು ಒದಗಿಸಿದ ಚೌಕಟ್ಟಿನ ಆಧಾರದ ಮೇಲೆ ಹೆಚ್ಚಿನ ಸಮೀಕ್ಷೆಗಳನ್ನು ಕೈಗೊಳ್ಳುವುದರ ಮೂಲಕ ವಿವಿಧ ವಲಯಗಳಿಂದ ಆರ್ಥಿಕತೆಗೆ ದೊರಕುವ ಕೊಡುಗೆಗಳನ್ನು ಅಂದಾಜಿಸಲು ಉಪಯೋಗಿಸಲಾಗುತ್ತದೆ. ಈ ಮಾಹಿತಿಯನ್ನು ಯಾವುದೇ ಸಾಕ್ಷ್ಯವಾಗಿ ಉಪಯೋಗಿಸುವಂತಿಲ್ಲ. ದೇಶದಲ್ಲಿ ಈವರೆಗೆ 6 ಆರ್ಥಿಕ ಗಣತಿಗಳು ನಡೆದಿದ್ದು, 1977ರಲ್ಲಿ ಮೊದಲ ಆರ್ಥಿಕ ಗಣತಿ, ಆ ಬಳಿಕ 1980, 1990, 1998, 2005, 2013 ರಲ್ಲಿ 6ನೇ ಗಣತಿ ಕಾರ್ಯ ನಡೆದಿದೆ. 7ನೇ ಆರ್ಥಿಕ ಗಣತಿಯಲ್ಲಿ ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು ಇದರ ಮೂಲಕ ಕೈಗೊಳ್ಳಲು ಉದ್ದೇಶಿಸಿದ್ದು 2020ರ ಜನವರಿ 1 ರಿಂದ ರಾಜ್ಯಾದ್ಯಂತ ಚಾಲನೆಗೊಂಡಿದೆ. ಈ ಗಣತಿಯ ಕ್ಷೇತ್ರ ಕಾರ್ಯವನ್ನು ಇದೇ ಪ್ರಥಮ ಬಾರಿಗೆ ಮೊಬೈಲ್ ಆಪ್ ಮೂಲಕ ಕೈಗೊಳ್ಳಲಾಗುತ್ತಿದೆ. ಆರ್ಥಿಕ ಗಣತಿ ಕಾರ್ಯದಲ್ಲಿ ಗಣತಿದಾರರು ತಮಗೆ ನಿರ್ದಿಷ್ಟಪಡಿಸಿದ ಗಡಿಯೊಳಗೆ ಬರುವ ಮನೆ ಹಾಗೂ ಎಲ್ಲಾ ಕಟ್ಟಡಗಳಿಗೆ ಭೇಟಿ ನೀಡಿ ಗಣತಿ ನಡೆಸುವುದರ ಮೂಲಕ ಅಲ್ಲಿ ನಡೆಯುವ ಉದ್ಯಮದ ಅಥವಾ ವ್ಯಾಪಾರ ಘಟಕದ ಎಣಿಕೆ ಮಾಡಲಾಗುತ್ತದೆ. ಯಾವುದೇ ಘಟಕದಲ್ಲಿ ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವಂತಹ ಉದ್ಯಮಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತದೆ. ಹೀಗೆ ಪಟ್ಟಿ ಮಾಡುವಾಗ ನಿರ್ದಿಷ್ಟ ಕಟ್ಟಡ ಹೊಂದಿ ವ್ಯವಹಾರ ಮಾಡುವ ಉದ್ಯಮಗಳಲ್ಲದೆ ನಿರ್ದಿಷ್ಟ ಕಟ್ಟಡವಿಲ್ಲದೆ ಸಂತೆ, ಬೀದಿ ಬದಿಯ ವ್ಯಾಪಾರ, ಮನೆಯಲ್ಲಿಯೇ ಕುಳಿತು ನಿರ್ವಹಿಸುವ ಟೈಲರಿಂಗ್, ಬೀಡಿ ಕಟ್ಟುವುದು ಮತ್ತು ವಿವಿಧ ಸ್ವಉದ್ಯೋಗಗಳು, ಸಣ್ಣ ಪ್ರಮಾಣದ ಹೈನುಗಾರಿಕೆ ಇತ್ಯಾದಿ ಆರ್ಥಿಕ ಚಟುವಟಿಕೆ ನಡೆಸುವ ಉದ್ಯಮಗಳನ್ನು ಅದರ ಮಾಲೀಕರ ಮನೆಯಲ್ಲಿ ಎಣಿಕೆ ಮಾಡಲಾಗುತ್ತದೆ. 7ನೇ ಆರ್ಥಿಕ ಗಣತಿಯಲ್ಲಿ ಕಟ್ಟಡದ ವಿಧ, ಕುಟುಂಬ ವಿವರ, ಸಾಮಾಜಿಕ ಗುಂಪು ಮತ್ತು ಧರ್ಮ, ಆರ್ಥಿಕ ಚಟುವಟಿಕೆಯ ವಿಧ, ಕಾರ್ಯವಿಧಾನ ಸ್ವರೂಪ, ಮನೆಯಲ್ಲಿ ಆರ್ಥಿಕ ಚಟುವಟಿಕೆ ನಡೆಸುವ ಸದಸ್ಯರ ವಿವರ, ಹಣಕಾಸಿನ ಮೂಲ, ಹೂಡಿಕೆ, ವಾರ್ಷಿಕ ವ್ಯವಹಾರ, ಕೆಲಸಗಾರರ ಸಂಖ್ಯೆ, ಘಟಕದ ನೋಂದಣಿಯ ವಿವರ, ಉದ್ಯಮ ಮಾಲೀಕರ ಲಿಂಗವಾರು ಸಾಮಾಜಿಕ ಗುಂಪುವಾರು ಮಾಹಿತಿಗಳು ಗಂಡು ಹೆಣ್ಣು ಕೆಲಸಗಾರರು, ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸಗಾರರು, ಉದ್ದಿಮೆಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಆದುದರಿಂದ ಸಾರ್ವಜನಿಕರು ಆರ್ಥಿಕ ಗಣತಿ ಕಾರ್ಯಾಚರಣೆಗೆ ಸಂಪೂರ್ಣ ಸಹಕಾರವನ್ನು ನೀಡುವುದು. ಈ ಗಣತಿಗೆ ಸಾಮಾನ್ಯ ಸೇವಾ ಕೇಂದ್ರದ ಗಣತಿದಾರರು ಮಾಹಿತಿ ಸಂಗ್ರಹಿಸಲು ಬಂದಾಗ ಸಾರ್ವಜನಿಕರು, ಉದ್ದಿಮೆದಾರರು ಅಗತ್ಯ ಮತ್ತು ನಿಖರ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ದ.ಕ. ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಸರ್ಕಾರಿ ಬಾಲಕರ ಬಾಲಮಂದಿರ- ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

error: Content is protected !!
Scroll to Top