ವಕ್ಫ್ ಮಂಡಳಿಯಿಂದ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.14   ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸರ್ಕಾರದ ಉತ್ತಮ ಯೋಜನೆಯಾಗಿದ್ದು, ಈ ಯೋಜನೆಯನ್ನು  ಸಮಾಜದ ಎಲ್ಲಾ ಸಮುದಾಯದವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ. ರತ್ನಾಕರ್  ಹೇಳಿದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡ “ಆರೋಗ್ಯ ಕಾರ್ಡ್ ವಿತರಣೆ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಅರಿವು ಹಾಗೂ ನೋಂದಾವಣಿ ಕಾರ್ಯಕ್ರಮ” ವನ್ನು ಉದ್ದೇಶಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

Nk Kukke


ಈ ಯೋಜನೆಯ ಅಡಿಯಲ್ಲಿ ಪ್ರಾಥಮಿಕ, ಸಾಮಾನ್ಯ ದ್ವಿತೀಯ, ಸಂಕೀರ್ಣ ದ್ವಿತೀಯ, ತೃತೀಯ ಹಾಗೂ ತುರ್ತು ಹಂತದ ಚಿಕಿತ್ಸೆಗಳನ್ನು ಒದಗಿಸಲಾಗುತ್ತದೆ.  ಬಿಪಿಎಲ್ ಕಾರ್ಡು ಹೊಂದಿದವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ  ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ. 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಎಪಿಎಲ್ ಕಾರ್ಡುದಾರರು ಅಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ 30%ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ. 1.50 ಲಕ್ಷ ಇರುತ್ತದೆ ಎಂದರು. ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳಿಗೆ ಈ ಯೋಜನೆ ಲಭ್ಯವಿದೆ. ಜೊತೆಗೆ ಮಾರಾಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯವಿರುತ್ತದೆ, ಅದರಲ್ಲಿ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೇ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು. ಆಯುಷ್ಮಾನ್ ಭಾರತ್  ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ “ಎಬಿ-ಎಆರ್ ಕೆ” ಕಾರ್ಡನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10 ಶುಲ್ಕದೊಂದಿಗೆ ನೀಡಲಾಗುತ್ತದೆ.  ಬಾಪೂಜಿ ಕೇಂದ್ರ, ಸೇವಾ ಸಿಂಧು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್‍ಗಳನ್ನು ಹಾಜರುಪಡಿಸಿ ಆರೋಗ್ಯಕಾರ್ಡ್ ಪಡೆಯಬಹುದು ಎಂದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಯು.ಕೆ.ಮೋನು ಮಾತನಾಡಿ, ಸರ್ಕಾರದ ಯೋಜನೆ, ಸೌಲಭ್ಯಗಳನ್ನು ಚಾಚು ತಪ್ಪದೆ ಪಾಲಿಸಿ ಸದುಪಯೋಗಪಡಿಸಿಕೊಳ್ಳಬೇಕು. ಭವಿಷ್ಯದ ದೃಷ್ಠಿಯಿಂದ ಈ ಯೋಜನೆಗಳು ತುಂಬಾ ಅತ್ಯಗತ್ಯ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾವಣಿ ಮಾಡುವ ಮೂಲಕ ಆರೋಗ್ಯ ಕಾರ್ಡ್ ಪಡೆದುಕೊಳ್ಳಿ  ಜೊತೆಗೆ ಇತರರಿಗೆ ಈ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಕ್ಷಯರೋಗಾಧಿಕಾರಿ ಡಾ. ಬದ್ರುದ್ದೀನ್, ಆಯುಷ್ಮಾನ್ ಭಾರತ ಸಂಯೋಜನಾಧಿಕಾರಿ ಡಾ.ಸಚ್ಚಿದಾನಂದ, ಜಿಲ್ಲಾ ವಕ್ಫಾ ಸಮಿತಿಯ ಸದಸ್ಯ ಅಸಲಾಂ, ಜಿಲ್ಲಾ ವ್ಯವಸ್ಥಾಪಕರು ಸಿಎಸಿ ಇ-ಗವರ್ನೆನ್ಸ್ ಸರ್ವಿಸ್ ಇಂಡಿಯಾ ಲಿಮಿಟೆಡ್ ಸವಿನ್ ಬಿ.ಎಲ್, ಜಿಲ್ಲಾ ವ್ಯವಸ್ಥಾಪಕಿ ಸೇವಾ ಸಿಂಧು ಅಕ್ಷತಾ ಕೆ.ಎನ್  ಉಪಸ್ಥಿತರಿದ್ದರು. ವಕ್ಫ್ ಅಧಿಕಾರಿ ಅಬೂಬಕ್ಕರ್ ನಿರೂಪಣೆ ಮಾಡಿದರು.

Also Read  ಕಳಾರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ, ಪೌಷ್ಟಿಕ ಆಹಾರ ಸಪ್ತಾಹ

error: Content is protected !!
Scroll to Top