ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಮನೆಭೇಟಿ- ಸಾರ್ವಜನಿಕರ ಸಹಕಾರ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.10  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯು ಹತ್ತು-ಹಲವಾರು ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ. ಅವುಗಳಲ್ಲಿ ಶಿಶುವಿನಿಂದ ಆರಂಭವಾಗಿ, ಶಾಲಾ ಮಕ್ಕಳಿಗೆ, ಗರ್ಭಿಣಿಯರಿಗೆ ಚುಚ್ಚು ಮದ್ದು ಲಸಿಕಾ ಕಾರ್ಯಕ್ರಮಗಳು, ಇಲಾಖೆಯ ಇತರ ಯೋಜನೆ/ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ/ ಸಾರ್ವಜನಿಕರಿಗೆ ತಲುಪಿಸುವಲ್ಲಿ ಆರೋಗ್ಯ ಮಾಹಿತಿ ಶಿಕ್ಷಣ ನೀಡುವಲ್ಲಿ, ಫಲಾನುಭವಿಗಳನ್ನು ಗುರುತಿಸುವಲ್ಲಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕರು/ಸಹಾಯಕಿಯರು ಹಾಗೂ ಆಶಾ ಕಾರ್ಯಕತೆಯರು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಎಲ್ಲಾ ಸಾರ್ವಜನಿಕರಿಗೂ ತಿಳಿದಿರುವ ವಿಷಯವಾಗಿರುತ್ತದೆ.


ಅಲ್ಲದೆ ನಮ್ಮ ಜಿಲ್ಲೆಯು ಈಗಾಗಲೇ ಡೆಂಗ್ಯು ಜ್ವರ, ಮಲೇರಿಯ, ಇಲಿಜ್ವರ, ಹೆಚ್1ಎನ್1 ಹಾಗೂ ಇತರ ಸಾಂಕ್ರಾಮಿಕ ಖಾಯಿಲೆಗಳಿಂದ ಜನ ಸಾಮಾನ್ಯರು ಮಳೆಗಾಲ ಸಂಧರ್ಭದಲ್ಲಿ ತೊಂದರೆಗೀಡಾಗಿರುವುದು ಮಾತ್ರವಲ್ಲದೆ ನಮ್ಮ ಜಿಲ್ಲೆಯಲ್ಲಿ ಡೆಂಗ್ಯುವಿನಿಂದ ಸಾವು ಪ್ರಕರಣಗಳು ದಾಖಲಾಗಿರುತ್ತದೆ. ಮಲೇರಿಯ ಹಾಗೂ ಡೆಂಗ್ಯು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು “ನಾಗರೀಕರಿಗೆ ಒಂದು ಸವಾಲು” ಎನ್ನುವ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಮನೆಭೇಟಿ ನೀಡಿ ನಿಗದಿತ ನಮೂನೆಯಲ್ಲಿ ವರದಿಗಳನ್ನು ಪಡೆಯುತ್ತಿದ್ದಾರೆ. ಈ ನಿಗದಿತ ನಮೂನೆಯ ವರದಿಯು ಡೆಂಗ್ಯು/ ಮಲೇರಿಯ ನಿಯಂತ್ರಣ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಸೂಕ್ತ ತ್ಯಾಜ್ಯ ವಿಲೇವಾರಿ, ಸೊಳ್ಳೆ ಉತ್ಪತ್ತಿ ತಾಣಗಳ ನಾಶದೊಂದಿಗೆ ಸಂಪೂರ್ಣವಾಗಿ ಸಾರ್ವಜನಿಕರಿಗೆ ಆರೋಗ್ಯ ಕುರಿತು ತಿಳುವಳಿಯನ್ನು ಮೂಡಿಸುವುದಾಗಿದೆ. ಅಲ್ಲದೆ ಉತ್ತಮ ರೀತಿಯ ಜೀವನ/ ಪರಿಸರ ಸ್ವಚ್ಛತೆಯನ್ನು ಹೊಂದಿರುವ ಕುಟುಂಬವನ್ನು ಗುರುತಿಸಿ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸದ್ರಿ ಕಾರ್ಯಕ್ರಮಗಳನ್ನು ಕಳೆದ ಹಲವಾರು ವರ್ಷಗಳಿಂದ ಇಲಾಖೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಮಾತ್ರ ಪಡೆಯುವುದರೊಂದಿಗೆ, ಸ್ವಚ್ಛ ಪರಿಸರ/ ಸ್ವಚ್ಛ ಮನೆ ಬಗ್ಗೆ ಆರೋಗ್ಯ ಇಲಾಖೆಯು ಮಾಹಿತಿ ನೀಡುತ್ತಾ ಶ್ರಮಿಸುತ್ತಿದೆ. ಆರೋಗ್ಯ ಇಲಾಖೆಯ ಯೋಜನೆ/ ಕಾರ್ಯಕ್ರಮ ಅನುಷ್ಠಾನಗೊಳಿಸಲು ಪ್ರತಿಯೊಬ್ಬ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಪ್ಪು ಮಾಹಿತಿ/ ವದಂತಿಗಳಿಗೆ ಕಿವಿಕೊಡದೆ ಇಲಾಖೆಯ ಕಾರ್ಯಕ್ರಮದ ಯಶಸ್ವಿಗೆ ಸಂಪೂರ್ಣ ಸಹಕರಿಸಲು ದ.ಕ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

Also Read  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಅಂಕಿತಾ ರಾಜ್ಯಕ್ಕೆ ದ್ವಿತೀಯ

Nk Kukke

error: Content is protected !!
Scroll to Top