(ನ್ಯೂಸ್ ಕಡಬ) newskadaba.com, ಕಡಬ, ಜ.3 ನೂಜಿಬಾಳ್ತಿಲ ಕಲ್ಲುಗುಡ್ಡೆ ಶ್ರೀರಾಮ್ ಫ್ರೆಂಡ್ಸ್ ಹಾಗೂ ಚಿರು ಎಸ್.ಎಂ. ಸೌಂಡ್ಸ್ ಮತ್ತು ಲೈಟಿಂಗ್ಸ್ ವತಿಯಿಂದ 4ನೇ ವರ್ಷದ ಹೊಸವರ್ಷದ ಪ್ರಯುಕ್ತ ಸಂಗೀತಾ ಕಾರ್ಯಕ್ರಮ ಹಾಗೂ ಕ್ರೀಡಾಪಟುಗಳ ಸಮ್ಮಾನ ಕಾರ್ಯಕ್ರಮ ಕಲ್ಲುಗುಡ್ಡೆಯಲ್ಲಿ ಬುಧವಾರ ನಡೆಯಿತು.
ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪ್ರಜ್ಞಾ ನಡುವಾಳು ಹಾಗೂ ಸ್ವಪ್ನಾ ಕುರಿಯಾಳ ಕೊಪ್ಪ ಅವರನ್ನು ಅತಿಥಿಗಳು ಗೌರವಿಸಿ, ಸಮ್ಮಾನಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ಯಕ್ಷ ಬೊಳ್ಳಿ ಕಡಬ ದಿನೇಶ್ ರೈ ಮಾತನಾಡಿ, ತುಳು ಸಂಸ್ಕೃತಿಯು ಆಚಾರ, ವಿಚಾರದಿಂದ ತನ್ನದೇ ಆದ ವಿಶಿಷ್ಟತೆಯೊಂದಿಗೆ ತನ್ನ ತನವನ್ನು ಉಳಿಸಿಕೊಂಡಿದೆ. ತುಳು ಭಾಷೆಗೆ ಮುಂದಿನ ದಿನಗಳಲ್ಲಿ ಮಾನ್ಯತೆ ಲಭಿಸುವ ವಿಶ್ವಾಸವಿದ್ದು, ನಾವುಗಳು ನಮ್ಮ ಮಾತೃಭಾಷೆ ತುಳುವನ್ನು ಮಾತನಾಡಿ, ತುಳು ಭಾಷೆಗೆ ಮಾನ್ಯತೆ ಸಿಗಲು ನಮ್ಮಿಂದಲೇ ಸಾಧ್ಯವಿದೆ ಎಂದರು. ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಶ್ರೀ ರಾಮ್ ಗೆಳೆಯರ ಬಳಗದ ವತಿಯಿಂದ ಸಾಧಕರನ್ನು ಸಮ್ಮಾನಿಸುವ ಜತೆಗೆ ಸಂಗೀತಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಉತ್ತಮ ಕಾರ್ಯ ಎಂದ ಅವರು ಸಮಾಜಮುಖಿ ಉತ್ತಮ ಕೆಲಸಗಳನ್ನು ಪ್ರೋತ್ಸಾಹಿಸೋಣ ಎಂದರು. ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ, ಗ್ರಾ.ಪಂ. ಸದಸ್ಯರಾದ ರಾಜು ಗೋಳಿಯಡ್ಕ, ಜಾನಕಿ ಕಲ್ಲುಗುಡ್ಡೆ, ದಲಿತ ಮುಖಂಡೆ ಸುಂದರಿ ಕಲ್ಲುಗುಡ್ಡೆ ಮಾತನಾಡಿದರು. ಗಣೇಶ್ ನಡುವಾಳು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶೃಂಗೇರಿ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘದ ಸದಸ್ಯರಿಂದ ಸಂಗೀತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ನಾಗರಿಕರು ಭಾಗವಹಿಸಿದ್ದರು. ಶ್ರೀ ರಾಮ್ ಗೆಳೆಯರ ಬಳಗದ ಶ್ಯಾಮ್‍ಪ್ರಸಾದ್ ಕಲ್ಲುಗುಡ್ಡೆ ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.