(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.26 ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯು ನೂಜಿಬಾಳ್ತಿಲ ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿ ವಿನಿತ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮದ ವಿವಿಧ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸಲು ಮುಂದಾದಂತೆ ಶಾಲೆಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಪ್ರಶ್ನಿಸುವಂತೆ ಸೂಚಿಸಿದ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಅವರು, ನಿಮ್ಮ ಶಾಲೆಯಲ್ಲಿ ಕೊಠಡಿ ಸಮಸ್ಯೆ, ನೀರಿನ ಸಮಸ್ಯೆ, ಪುಸ್ತುಕ ಪರಿಕರಗಳ, ಆಟಿಕೆಗಳ ಸಮಸ್ಯೆ ಇದ್ದಲ್ಲಿ ತಿಳಿಸಿ ಎಂದು ಸೂಚಿಸಿದರು. 8ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡುವ ಸೈಕಲ್‍ಗಳ ಗುಣಮಟ್ಟ ಕಳಪೆಯಾಗಿದ್ದು, ಸೈಕಲ್ ನೀಡಿ ತಿಂಗಳಾಗುತ್ತಲೇ ಕೆಟ್ಟು ಹೋಗುತ್ತದೆ. ಉತ್ತಮ ಗುಣಮಟ್ಟದ ಸೈಕಲ್ ನೀಡಬೇಕೆಂದು ಆಗ್ರಹಿಸಿದರು. ಸರಕಾರ ನೀಡುವ ಸೈಕಲ್‍ಗಳು ತೀರಾ ಕಳಪೆಯಾಗಿದ್ದು. ಈ ಬಗ್ಗೆ ಸರಕಾರಕ್ಕೆ ಶಿಕ್ಷಣ ಇಲಾಖಾಧಿಕಾರಿಗಳ ಮೂಲಕ ಮನವಿ ಮಾಡಿಕೊಳ್ಳಲಾಗುವುದೆಂದು ಗ್ರಾ.ಪಂ. ಅದ್ಯಕ್ಷರು ಉತ್ತರಿಸಿದರು. ನೂಜಿಬಾಳ್ತಿಲ ಕಲ್ಲುಗುಡ್ಡೆ ಶಾಲೆಯಲ್ಲಿ 9ನೇ ಹಾಗೂ 10ನೇ ತರಗತಿ ಪ್ರಾರಂಬಿಸಬೇಕೆಂದು ವಿದ್ಯಾರ್ಥಿ ವೆಂಕಟೇಶ್ ಒತ್ತಾಯಿಸಿದರು. ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಈಗಾಗಲೇ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಗೊಂಡರೆ ನಾವು ಒತ್ತಡ ಹೇರಬಹುದು ಎಂದ ಅವರು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದನ್ನು ಬಿಟ್ಟು ಸರಕಾರಿ ಶಾಲೆಗೆ ಕಳುಹಿಸಬೇಕು. ಇಲ್ಲಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದರೆ ಹೈಸ್ಕೂಲ್ ಪ್ರಾರಂಬಿಸಲು ತೊಂದರೆ ಇಲ್ಲ ಎಂದರು.
ರೆಂಜಿಲಾಡಿ ಶಾಲಾ ವಿದ್ಯಾರ್ಥಿ ಶರತ್ ಮಾತನಾಡಿ, ರೆಂಜಿಲಾಡಿ ಶಾಲಾ ಕಟ್ಟಡದ ಬಳಿ ಗ್ರಾ.ಪಂ.ಗೊಳಪಟ್ಟ ಸಾರ್ವಜನಿಕ ಕುಡಿಯುವ ನೀರಿನ ದೊಡ್ಡ ಟ್ಯಾಂಕ್ ದುರ್ಬಲಗೊಂಡು ಶಿಥಿಲಾವಸ್ಧೆಯಲ್ಲಿದ್ದು, ಕುಸಿಯುವ ಭೀತಿಯಲ್ಲಿದೆ. ಅದನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದರು. ಉತ್ತರಿಸಿದ ಸದಾನಂದ ಗೌಡ ಅವರು ತಮ್ಮ ಸಂಬಂದಪಟ್ಟ ಇಂಜಿನಿಯರ್ ಮೂಲಕ ದುರಸ್ತಿಗೆ ಎಸ್ಟಿಮೇಟ್ ಮಾಡಿಕಳಿಸಿದ್ದೇವೆ, ಜಿ.ಪಂ. ಸದಸ್ಯರು ತುರ್ತು ಕ್ರಮ ಕೈಗೊಂಡಿದ್ದು ಕೊಡಲೇ ಅದನ್ನು ದುರಸ್ತಿಗೊಳಿಸಲಾಗುವುದು ಎಂದರು. ನೂಜಿಬಾಳ್ತಿಲ ಉ.ಹಿ.ಪ್ರಾ. ಶಾಲೆಗೆ ಕಳೆದ ಮೂರು ವರ್ಷಗಳಿಂದ ಮುಖ್ಯಗುರುಗಳ ಹುದ್ದೆಖಾಲಿ ಇದ್ದರೂ ಇಲಾಖೆಯಾಗಲೀ ಜನಪ್ರತಿನಿಧಿಗಳಾಗಲೀ ಗಮನ ಹರಿಸುತ್ತಿಲ್ಲ, ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತೇವೆ ಎನ್ನುತ್ತಿರುವ ಅಧಿಕಾರಿಗಳು ಶಾಲೆಗೆ ಶಿಕ್ಷಕರನ್ನು ಕೊಡುತ್ತಿಲ್ಲವೆಂದು ದೂರಿದ ವಿದ್ಯಾರ್ಥಿ ವೆಂಕಟೇಶ್ ಕೂಡಲೇ ನಮ್ಮ ಶಾಲೆಗೆ ಮುಖ್ಯೋಪಾದ್ಯಾಯರನ್ನು ನೇಮಿಸಬೇಕೆಂದು ಆಗ್ರಹಿಸಿದರು. ಸದಾನಂದ ಗೌಡ ಉತ್ತರಿಸಿ ಈ ಬಗ್ಗೆ ಸಂಬಂದಪಟ್ಟ ಇಲಾಖೆ ಹಾಗೂ ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಮೂಲಕ ಶಾಲೆಗೆ ಹೆಚ್.ಎಂ. ಕೊಡಿಸುವಂತೆ ಒತ್ತಡ ತರುತ್ತೇವೆ ಎಂದರು. ನೂಜಿಬಾಳ್ತಿಲ ಗ್ರಾ.ಪಂ ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ರಜಿತಾಪದ್ಮನಾಭ, ಪುಷ್ಪಲತಾ, ತೋಮಸ್.ಕೆ,ಜೆ, ಜಾನಕಿ, ಹೊನ್ನಮ್ಮ ಉಪಸ್ಧಿತರಿದ್ದರು. ಗ್ರಾ.ಪಂ. ಪಿಡಿಒ ಆನಂದ ಸ್ವಾಗತಿಸಿ, ವಂದಿಸಿದರು. ನೂಜಿಬಾಳ್ತಿಲ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಎಂ. ಕಾರ್ಯಕ್ರಮ ನಿರೂಪಿಸಿದರು.