ತುಂಬೆ ಡ್ಯಾಂ- 7 ಮೀಟರ್ ನೀರು ನಿಲುಗಡೆಗೆ ಕ್ರಮ ವಹಿಸಲು  ಜಿಲ್ಲಾ  ಉಸ್ತುವಾರಿ ಕಾರ್ಯದರ್ಶಿ ವಿ ಪೊನ್ನುರಾಜ್ ಸೂಚನೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.18   ಮಂಗಳೂರು ಮಹಾನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟಿನಲ್ಲಿ 7 ಮೀಟರ್ ನೀರು ನಿಲ್ಲಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ, ಕೂಡಲೇ ವರದಿ ನೀಡಲು ಕೆ.ಪಿ..ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ ಪೊನ್ನುರಾಜ್ ಸೂಚಿಸಿದ್ದಾರೆ.


ಇವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. 7 ಮೀಟರ್ ನೀರು ನಿಲ್ಲಿಸುವುದರಿಂದ ಮುಳುಗಡೆಯಾಗುವ ಪ್ರದೇಶವನ್ನು ನಿಖರವಾಗಿ ಅಂದಾಜಿಸಿ, ಕಂದಾಯ ಮತ್ತು ಸರ್ವೇ ಇಲಾಖೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಜಂಟೀಯಾಗಿ ಪರಿಶೀಲಿಸಬೇಕು ಎಂದು ಅವರು ಸೂಚಿಸಿದರು. ಜಿಲ್ಲೆಯ ನಗರ, ಪಟ್ಟಣಗಳ ಬಸ್‍ಸ್ಟಾಂಡ್, ಮಾರುಕಟ್ಟೆ ಸೇರಿದಂತೆ ಪ್ರಮುಖ ಪೇಟೆ,  ಜಂಕ್ಷನ್‍ಗಳಲ್ಲಿ ಸಾರ್ವಜನಿಕ ಓಡಾಟ ನಿರಂತರವಾಗಿರುವುದರಿಂದ ಅಂತಹ ಸ್ಥಳಗಳಲ್ಲಿ ಶೌಚಾಲಯಗಳನ್ನು ಇನ್ನಷ್ಟು ನಿರ್ಮಿಸಬೇಕು. ಇವುಗಳ ನಿರ್ವಹಣೆಯನ್ನೂ ಸಮರ್ಪಕಗೊಳಿಸಬೇಕು. ಅಲ್ಲದೇ, ಶೌಚಾಲಯಗಳ ಆವರಣದಲ್ಲಿ ಬಳಕೆದಾರರ ಪ್ರತಿಕ್ರಿಯೆ ಅರಿಯಲು ಅಗತ್ಯ ಯಂತ್ರಗಳನ್ನು ಅಳವಡಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಬಡವರಿಗೆ ಮನೆ ನಿರ್ಮಾಣದ ವಸತಿ ಯೋಜನೆಗಳ ಪ್ರಗತಿ ತೃಪ್ತಿಕರವಾಗಿಲ್ಲ. ಈ ನಿಟ್ಟಿನಲ್ಲಿ ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟು, ಮನೆ ನಿರ್ಮಾಣ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಪ್ರಯತ್ನಿಸಬೇಕು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇಡ್ಯಾ ಗ್ರಾಮದಲ್ಲಿ 600 ಮನೆ ನಿರ್ಮಾಣಕ್ಕೆ ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಇದನ್ನು ಸಮರ್ಪಕವಾಗಿ ನಡೆಸಬೇಕು ಎಂದು ಪೊನ್ನುರಾಜ್ ತಿಳಿಸಿದರು.

ಮಳೆಯಿಂದ ಹಾನಿಯಾದ ಮನೆಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕು. ಹಾನಿಗೊಳಗಾದ ಪ್ರತಿ ಕುಟುಂಬಕ್ಕೆ ತಲಾ ರೂ. 1 ಲಕ್ಷ ಸರ್ಕಾರ ನೀಡುತ್ತಿದೆ. ಇದರ ಮುಂದಿನ ಕ್ರಮಗಳನ್ನು ಅಧಿಕಾರಿಗಳು ಜನರಿಗೆ ತಿಳಿಯಪಡಿಸಬೇಕು. ಅಧಿಕಾರಿಗಳು ಉತ್ಸಾಹದಿಂದ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅತಿವೃಷ್ಠಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮೊದಲ ಕಂತು ಒಂದು ಲಕ್ಷ ರೂ. ಜಮೆಯಾಗಿರುವ ಬಗ್ಗೆ ಖುದ್ದು ಪರಿಶೀಲಿಸಲು ಪೊನ್ನುರಾಜ್ ಸೂಚಿಸಿದರು. ಜಿಲ್ಲೆಯ ಸರ್ವೇ ಇಲಾಖೆಯಲ್ಲಿ 12 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ 11 ಇ ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ಇವುಗಳ ಪೈಕಿ ಬಹುತೇಕ ಪ್ರಕರಣಗಳು ದಾಖಲೆ ತಿದ್ದುಪಡಿಗೆ ಸಂಬಂಧಪಟ್ಟವುಗಳಾಗಿವೆ. ಈ ನಿಟ್ಟಿನಲ್ಲಿ ನಿವೃತ್ತ ಅನುಭವಿ ಕಂದಾಯ ಸಿಬ್ಬಂದಿಗಳನ್ನು ಗೌರವಧನದ ಆಧಾರದಲ್ಲಿ ನೇಮಿಸಿ, ಈ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳ ಬಗ್ಗೆ ವರದಿ ನೀಡಲು ಅವರು ವಕ್ಫ್ ಅಧಿಕಾರಿಗೆ ಸೂಚಿಸಿದರು. ಸಭೆಯಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಲನ್ ಹಾಗೂ  ಜಿಲ್ಲಾ ಮಟ್ಟದ ವಿವಿಧ  ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group