ಜನವರಿ 3ರಿಂದ ಕರಾವಳಿ ಉತ್ಸವ- ಉಸ್ತುವಾರಿ ಸಚಿವ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.17  ಈ ಸಾಲಿನ ಕರಾವಳಿ ಉತ್ಸವ ಜನವರಿ 3 ರಿಂದ ಮಂಗಳೂರಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಸೋಮವಾರ ಮಹಾನಗರಪಾಲಿಕೆ ಸಭಾಂಗಣದಲ್ಲಿ ಕರಾವಳಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ನಗರದ ಮಂಗಳಾ ಕ್ರೀಡಾಂಗಣ ಹಾಗೂ ಕದ್ರಿ ಉದ್ಯಾನವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ನಾಡಿನ ಸಂಸ್ಕೃತಿ, ಕಲೆ, ಜನಪದ, ಕ್ರೀಡೆಯ ಅತ್ಯುನ್ನತ ಪ್ರದರ್ಶನ ಈ ಕರಾವಳಿ ಉತ್ಸವದಲ್ಲಿ ಪ್ರತಿಬಿಂಬಿತವಾಗಬೇಕು. ಈ ನಿಟ್ಟಿನಲ್ಲಿ ಉತ್ಸವದ ಎಲ್ಲಾ ಉಪಸಮಿತಿಗಳು ಉತ್ತಮ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.


ಕರಾವಳಿ ಉತ್ಸವದ ಉದ್ಘಾಟನೆ ದಿನದಂದು ನಡೆಯುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ಎಲ್ಲಾ ಪ್ರಕಾರಗಳ ಸಾಂಸ್ಕೃತಿಕ ತಂಡಗಳನ್ನು, ಸ್ತಬ್ದ ಚಿತ್ರಗಳನ್ನು ಒಳಗೊಂಡಿರಬೇಕು. ಉತ್ಸವದ ಯಶಸ್ಸು ಮೆರವಣಿಗೆಯಲ್ಲಿ ಪ್ರತಿಬಿಂಬಿತವಾಗುವುದರಿಂದ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ತುಳು, ಬ್ಯಾರಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಜೊತೆಗೂಡಿ ಮೆರವಣಿಗೆಯ ರೂಪುರೇಷೆ ನಿರ್ಧರಿಸಿ ಅಂತಿಮಗೊಳಿಸಲು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಕರಾವಳಿ ಉತ್ಸವ ಮೈದಾನ ಕಿರಿದಾಗಿರುವುದರಿಂದ ಹೆಚ್ಚು ಸ್ಟಾಲ್‍ಗಳನ್ನು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಸಮಸ್ಯೆ ಆಗಿರುವ ಬಗ್ಗೆ ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ಪೂರ್ತಿ ಕರಾವಳಿ ಉತ್ಸವ ಮೈದಾನದಲೀ ಉತ್ಸವ ನಡೆಸುವ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ಧಾರಕ್ಕೆ ಬರಲು ಅವರು ಸೂಚಿಸಿದರು. ಉತ್ಸವದ ಉದ್ಘಾಟನೆಯನ್ನು ಖ್ಯಾತನಾಮರಿಂದ ನಡೆಸುವ ಬಗ್ಗೆ ಜಿಲ್ಲಾಡಳಿತ ತೀರ್ಮಾನಿಸಲಿದೆ. ಉತ್ಸವದ ಸಂಧರ್ಭದಲ್ಲಿ ಯಾವುದೇ ಸಂಚಾರ ಸಮಸ್ಯೆ ಆಗದಂತೆ ಕ್ರಮ ವಹಿಸಲು ತಿಳಿಸಿದರು.

Also Read  ಮಡಿಕೇರಿ- ಮಂಗಳೂರು ಸಂಪರ್ಕದ ಪರ್ಯಾಯ ರಸ್ತೆಗೂ ಕುಸಿತದ ಭೀತಿ..!! ➤ ಸಂಚಾರ ನಿರ್ಬಂಧ


ಬೀಚುತ್ಸವ ಕೊನೆಯ ಮೂರು ದಿನಗಳಲ್ಲಿ ಪಣಂಬೂರು ಬೀಚ್‍ನಲ್ಲಿ ನಡೆಯಲಿದೆ. ಈ ಸಲ ವಿಶೇಷ ಆಕರ್ಷಣೆಯಾಗಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಸಲಾಗುವುದು. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಕ್ರೀಡಾಳುಗಳನ್ನು ನಗರಕ್ಕೆ ಕರೆತರಲು ಬೀಚ್ ಉತ್ಸವ ಉಪಸಮಿತಿ ಸದ್ದತೆ ನಡೆಸಲು ಉಸ್ತುವಾರಿ ಸಚಿವ  ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು. ಪಣಂಬೂರು ರಾಷ್ಟ್ರೀಯ ಹೆದ್ದಾರಿಯಿಂದ ಬೀಚ್‍ಗೆ ಹೋಗುವ ರಸ್ತೆಯ ಕಾಂಕ್ರೀಟಿಕರಣ ನಡಯುತ್ತಿದ್ದು ಜನವರಿ 5ರೊಳಗೆ ಸದರಿ ರಸ್ತೆಯನ್ನು ಸಂಚಾರಕ್ಕೆ ಬಿಟ್ಟು ಕೊಡಲು ಸಚಿವರು ಎನ್.ಎಂ.ಪಿ.ಟಿ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಜಿಲ್ಲಾಧಿಕಾರಿ ಸಿಂದೂ ರೂಪೇಶ್ ವಿವಿಧ ಅಕಾಡೆಮಿ ಅಧ್ಯಕ್ಷರುಗಳಾದ ದಯಾನಂದ ಕತ್ತಲ್‍ಸಾರ್, ರಹೀಂ ಉಚ್ಚಿಲ್, ಜಗದೀಶ್ ಪೈ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಮತ್ತಿತರರು ಇದ್ದರು. ಸಭೆಯಲ್ಲಿ ಕರಾವಳಿ ಉತ್ಸವ  ವಿವಿಧ ಉಪಸಮಿತಿಗಳ ಅಧ್ಯಕ್ಷರು, ಕ್ರಿಯಾಯೋಜನೆಯ  ವಿವರ ಮಂಡಿಸಿದರು.

Also Read  ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಆರೋಪ: ಸುಳ್ಯ, ಬೈಂದೂರು ಶಾಸಕರು ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top