ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನ ಚಂಪಾಷಷ್ಠಿ ಉತ್ಸವ ಸಭೆ

 (ನ್ಯೂಸ್ ಕಡಬ) newskadaba.com, ಮಂಗಳೂರು , ನ.30. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನವೆಂಬರ್ 24 ರಂದು ಶ್ರೀ ದೇವಳದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವಗಳು ಪ್ರಾರಂಭವಾಗಿದ್ದು, ವಿಶೇಷವಾಗಿ ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆನ ಚೌತಿ, ಪಂಚಮಿ, ಚಂಪಾಷಷ್ಠಿ ರಥೋತ್ಸವಗಳ ಬಗ್ಗೆ ಕ್ಷೇತ್ರಕ್ಕೆ ಬರುವ ಅಧಿಕ ಸಂಖ್ಯೆಯ ಭಕ್ತಾದಿಗಳ ಒತ್ತಡಕ್ಕನುಗುಣವಾಗಿ ಕ್ಷೇತ್ರದಲ್ಲಿ ಭಕ್ತರ ಹೆಚ್ಚಿನ ಅನುಕೂಲಕ್ಕಾಗಿ ಆಡಳಿತದ ವತಿಯಿಂದ ವಿವಿಧ ಕಾರ್ಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ.

ಈಗಾಗಲೇ ಮುಜರಾಯಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಕ್ಷೇತ್ರಕ್ಕೆ ಆಗಮಿಸಿದ್ದು, ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಭಕ್ತಾದಿಗಳ ಉರುಳು ಸೇವೆ ಬಗ್ಗೆ ಸಮರ್ಪಕವಾದ ರಸ್ತೆ ವ್ಯವಸ್ಥೆ, ನೂತನ ವಸತಿಗೃಹಕ್ಕೆ ಪೀಠೋಪಕರಣ ವ್ಯವಸ್ಥೆಗಳನ್ನು ಅಳವಡಿಸಿ ವಸತಿ ಬಗ್ಗೆ ವ್ಯವಸ್ಥೆ ಕಲ್ಪಿಸುವುದು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಭದ್ರತೆ ವ್ಯವಸ್ಥೆ ಇತ್ಯಾದಿ ವಿಚಾರವಾಗಿ ಸೂಕ್ತ ಕ್ರಮ ಜರುಗಿಸುವಂತೆ ಆದೇಶಿಸಿರುತ್ತಾರೆ. ಮುಜರಾಯಿ ಸಚಿವರ ನಿರ್ದೇಶನದ ಹಿನ್ನಲೆಯಲ್ಲಿ ಮತ್ತು ಪ್ರತಿ ವರ್ಷ ವಾರ್ಷಿಕವಾಗಿ ದೇವಳದಲ್ಲಿ ದೇವಳದ ಆಡಳಿತ ವರ್ಗ, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸರಕಾರಿ ಇಲಾಖಾಧಿಕಾರಿಗಳು ಹಾಗೂ ಊರ ನಾಗರಿಕರ ಪೂರ್ವ ಭಾವಿ ಸಭೆಯನ್ನು ನವೆಂಬರ್ 4 ರಂದು ಸಹಾಯಕ ಕಮೀಷನರ್, ಪುತ್ತೂರು ಉಪವಿಭಾಗ ಇವರ ಅಧ್ಯಕ್ಷತೆಯಲ್ಲಿ ಮತ್ತು ನವೆಂಬರ್ 21 ರಂದು ದೇವಳದ ಆಡಳಿತಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ನವೆಂಬರ್ 27 ರಂದು ದ.ಕ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಗಳನ್ನು ನಡೆಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ನವೆಂಬರ್ 26 ರ ಲಕ್ಷದ್ವೀಪ ಅಮಾವಾಸ್ಯೆ ದಿನದಿಂದ ನವೆಂಬರ್ 2ರ ಚಂಪಾ ಷಷ್ಠಿ ವರೆಗೆ ಭಕ್ತಾದಿಗಳು ನಡೆಸುವ ಬೀದಿ ಮಡೆಸ್ನಾನ (ಉರುಳು ಸೇವೆ) ಬಗ್ಗೆ ಕುಮಾರಧಾರಾ ಪ್ರವೇಶ ಗೋಪುರದಿಂದ ರಥ ಬೀದಿಯವರೆಗೂ ರಸ್ತೆಯುದ್ದಕ್ಕೂ ಹೊಂಡ  ಮುಚ್ಚಿ, ನೀರು ಸಿಂಪಡಿಸುವುದರ ಮೂಲಕ ಪಿ ಡಬ್ಲ್ಯೂ ಡಿ ಇಲಾಖಾ ವತಿಯಿಂದ ಮಾಡಿಸಿ ನಿತ್ಯ ಬೀದಿಯನ್ನು ಶುಚಿಗೊಳಿಸಲಾಗುತ್ತಿದೆ. ರಸ್ತೆ ಬದಿಯಲ್ಲಿ ಸಂಪೂರ್ಣವಾಗಿ ಮೆಸ್ಕಾಂ ವತಿಯಿಂದ ವಿದ್ಯುತ್ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲಲ್ಲಿ ಭಕ್ತಾದಿಗಳಿಗೆ ಸ್ಪಷ್ಟ ಮಾಹಿತಿ ತಿಳಿಸುವಂತೆ ಸೈನ್ ಬೋರ್ಡ್‍ಗಳನ್ನು ಅಳವಡಿಸಲಾಗಿದೆ. ಕಾಶಿಕಟ್ಟೆ – ಆದಿಸುಬ್ರಹ್ಮಣ್ಯ ರಸ್ತೆ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್‍ಸ್ಟಾಂಡ್ ಪಕ್ಕದಿಂದ ಆದಿ ಸುಬ್ರಹ್ಮಣ್ಯಕ್ಕೆ ಬರುವ ರಸ್ತೆಯನ್ನು ಸುಸಜ್ಜಿತಗೊಳಿಸಿ ವಾಹನ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆಯವರಿಗೆ ಆದೇಶಿಸಲಾಗಿದೆ.

Also Read  ಬಿಳಿನೆಲೆ : ರಸ್ತೆ ಬದಿಯಲ್ಲಿನ ಪೊದೆಗಳನ್ನು ಕಡಿದು, ಸ್ವಚ್ಚಗೊಳಿಸುವ ಮೂಲಕ 74ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ

ಡಿಸೆಂಬರ್ 1 ರ ಮಧ್ಯಾಹ್ನದಿಂದ 2 ರ ಮಧ್ಯಾಹ್ನವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ನಿಲುಗಡೆಗೆ ಪ್ರತ್ಯೇಕವಾಗಿ ಕುಮಾರಧಾರೆಯಿಂದ ವ್ಯವಸ್ಥೆ ಮಾಡಿದ್ದು, ಇನ್ನಿತರ ಖಾಸಗಿ ವಾಹನಗಳ ಪಾರ್ಕಿಂಗ್‍ಗೆ ಸ್ಥಳೀಯ ಜೂನಿಯರ್ ಕಾಲೇಜು ಮೈದಾನ, ಡಿಗ್ರಿ ಕಾಲೇಜು ಮೈದಾನ, ಬಿಲದ್ವಾರದ ಎದುರಿನ ಪಾರ್ಕಿಂಗ್ ಸ್ಥಳ, ಸವಾರಿ ಮಂಟಪದ ಪಾರ್ಕಿಂಗ್ ಸ್ಥಳ ಮತ್ತು ಸುಳ್ಯ ಮಾರ್ಗದಲ್ಲಿ ಇಂಜಾಡಿ ರಸ್ತೆ ಬದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ ಪೋಲಿಸ್ ಗ್ರೌಂಡ್ ಮತ್ತು ವಲ್ಲೀಶ ಸಭಾಭವನದ ಎದುರುಗಡೆ ವ್ಯವಸ್ಥೆ ಮಾಡಲಾಗಿದೆ. ಡಿಸೆಂಬರ್ 1 ರ ಬೆಳಿಗ್ಗೆ 10 ಗಂಟೆಯಿಂದ 2 ರ ಮಧ್ಯಾಹ್ನ 3 ರ ವರೆಗೆ ಕ್ಷೇತ್ರಕ್ಕೆ ಬರುವ ಖಾಸಗಿ ವಾಹನಗಳನ್ನು ಕುಮಾರಧಾರಾ ಗೋಪುರದಿಂದ ಹಾಗೂ ಇಂಜಾಡಿ ಸೇತುವೆಯ ಬಳಿ ನಿರ್ಬಂಧಗೊಳಿಸಲಾಗುವುದು. ಭಕ್ತಾದಿಗಳಿಗೆ ಕುಡಿಯುವ ನೀರಿನ ಬಗ್ಗೆ ಕುಮಾರಧಾರೆ, ಬಿಲದ್ವಾರ, ಅಡ್ಡಬೀದಿ, ರಥಬೀದಿ, ಆದಿಸುಬ್ರಹ್ಮಣ್ಯ, ಸವಾರಿ ಮಂಟಪ ಇತ್ಯಾದಿ ಸುಮಾರು 11 ಕಡೆಗಳಲ್ಲಿ ಸಿಂಟೆಕ್ಸ್ ಟ್ಯಾಂಕಿಗಳ ಮೂಲಕ ವ್ಯವಸ್ಥೆ, ಈಗಾಗಲೇ ಶ್ರೀ ದೇವಳದ ವತಿಯಿಂದ ಇರುವ 125 ಶೌಚಾಲಯಗಳ ವ್ಯವಸ್ಥೆಯಲ್ಲದೆ ಜಾತ್ರಾ ಸಂಬಂಧವಾಗಿ ಹೆಚ್ಚುವರಿ 30 ಶೌಚಾಲಯಗಳನ್ನು ಮಾಡಲಾಗಿದೆ.

ಆದಿ ಸುಬ್ರಹ್ಮಣ್ಯದಲ್ಲಿರುವ ನೂತನ ವಸತಿಗೃಹಗಳ ಕೊಠಡಿಗಳನ್ನು ತುರ್ತಾಗಿ ಶುಚಿಗೊಳಿಸಿ ಭಕ್ತಾದಿಗಳಿಗೆ ಜಾತ್ರೆ ಸಂದರ್ಭದಲ್ಲಿ ನೀಡಲಾಗುತ್ತದೆ. ಭಕ್ತಾದಿಗಳ ಅನ್ನ ಸಂತರ್ಪಣೆ ಬಗ್ಗೆ ಅಂಗಡಿಗುಡ್ಡೆ, ಷಣ್ಮುಖ ಪ್ರಸಾದ ಭೋಜನಶಾಲೆ, ಶೃಂಗೇರಿ ಮಠ, ಆದಿಸುಬ್ರಹ್ಮಣ್ಯದಲ್ಲಿ ಒಟ್ಟಾಗಿ 4 ಕಡೆಗಳಲ್ಲಿ ವಿಶೇಷ ಅಡುಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳ ಒತ್ತಡ ಹೆಚ್ಚಿರುವುದರಿಂದ ಅಂಗಡಿಗುಡ್ಡೆ ಭೋಜನದ ವ್ಯವಸ್ಥೆಗೆ ಆದಿಸುಬ್ರಹ್ಮಣ್ಯ ದಾರಿಯಲ್ಲಿ ಏಕಮುಖವಾದ ದಾರಿ ಮಾತ್ರವೇ ಇರುವುದರಿಂದ ಈ ಬಗ್ಗೆ ಭಕ್ತಾದಿಗಳ ಒತ್ತಡ ನಿಯಂತ್ರಿಸಲು ಪ್ರತ್ಯೇಕ ಭದ್ರತಾ ಸಿಬ್ಬಂದಿಗಳ ನಿಯೋಜನೆಯನ್ನು ಮಾಡಲಾಗಿದೆ.
ಕ್ಷೇತ್ರದಲ್ಲಿ ಭದ್ರತೆ ವ್ಯವಸ್ಥೆ ಬಗ್ಗೆ ಹೆಚ್ಚುವರಿ ಸಿಸಿ ಟಿವಿ ಕ್ಯಾಮರಾಗಳು, ಕುಮಾರಧಾರೆ, ದೇವಳದ ಪಕ್ಕ ಹೆಚ್ಚುವರಿ ಲಗ್ಗೇಜ್ ಕೊಠಡಿಗಳು, ಮಾಹಿತಿ ಕೇಂದ್ರಗಳು, ಪ್ರಸಾದ ಕೌಂಟರ್ ಗಳು, ಬ್ರಹ್ಮರಥೋತ್ಸವದ ಸಮಯ ಭಕ್ತಾದಿಗಳ ಒತ್ತಡ ನಿಯಂತ್ರಿಸಲು ಹೆಚ್ಚುವರಿ ಬಂದೋಬಸ್ತು ಸಿಬ್ಬಂದಿಗಳ ನಿಯೋಜನೆ, ಪ್ರಥಮ ಚಿಕಿತ್ಸೆ ಬಗ್ಗೆ 2 ವೈದ್ಯಕೀಯ ಶಾಪ್‍ಗಳು, ಅಂಬ್ಯುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆ, ಪೌರಕಾರ್ಮಿಕರ ನಿಯೋಜನೆ ಮೂಲಕ ಕ್ಷೇತ್ರದ ಸಮಗ್ರ ಶುಚಿತ್ವದ ಹಾಗೂ ನೈರ್ಮಲ್ಯ ರಕ್ಷಣೆ ವ್ಯವಸ್ಥೆ, ಭಕ್ತಾದಿಗಳ ಹೊರೆಕಾಣಿಕೆ ಸ್ವೀಕಾರಕ್ಕೆ ಸೂಕ್ತ ಸಿಬ್ಬಂದಿಗಳ ನಿಯೋಜನೆ ವ್ಯವಸ್ಥೆ, ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಮೂಲಕ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ, ಹೆಚ್ಚುವರಿಯಾಗಿ ಆರಕ್ಷಕ ಠಾಣಾ ಸಿಬ್ಬಂದಿಗಳು, ಹೋಂಗಾರ್ಡ್, ಸೆಕ್ಯೂರಿಟಿ ಸಿಬ್ಬಂದಿಗಳ ನಿಯೋಜನೆ ಮೂಲಕ ಕ್ಷೇತ್ರದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ, ಸಂತೆ ವ್ಯಾಪಾರಸ್ಥರ ಅನುಕೂಲಕ್ಕಾಗಿ ಪ್ರತ್ಯೇಕ ವ್ಯವಸ್ಥೆ, ಕೃಷಿ ಮೇಳ ಮುಂತಾದ ಸಮಗ್ರ ವ್ಯವಸ್ಥೆಗಳ ಬಗ್ಗೆ ದೇವಳದ ಆಡಳಿತ ಕ್ರಮ ಕೈಗೊಂಡಿದೆ. ವಿಶೇಷವಾಗಿ ಕುಮಾರಧಾರೆ ಪ್ರವೇಶ ಗೋಪುರದಿಂದ ಕಾಶಿಕಟ್ಟೆವರೆಗೆ ಒಟ್ಟು 5 ಮಿನಿ ಬಸ್ಸುಗಳ ಉಚಿತ ವ್ಯವಸ್ಥೆ, ಭಕ್ತಾದಿಗಳಿಗೆ ಸೇವೆ ಇತ್ಯಾದಿ ಸಂಪೂರ್ಣ ಮಾಹಿತಿ ಬಗ್ಗೆ ಕಚೇರಿ ದೂರವಾಣಿ ಸಂಖ್ಯೆ 08257 – 281423, 295244, 281265 ಗಳ ವ್ಯವಸ್ಥೆ, ಭದ್ರತೆ ಬಗ್ಗೆ ಹೆಚ್ಚುವರಿ ಸಿಸಿ ಟಿವಿಗಳ ಅಳವಡಿಕೆ, ರಥೋತ್ಸವಾದಿಗಳ ವೀಕ್ಷಣೆಗಾಗಿ LCD ಟಿವಿಗಳ ಅಳವಡಿಕೆ, ಇತ್ಯಾದಿ ಸಮಗ್ರ ವ್ಯವಸ್ಥೆಗಳನ್ನು ಆಡಳಿತ ವತಿಯಿಂದ ಕೈಗೊಳ್ಳಲಾಗಿದೆ.

Also Read  ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಮೃತ್ಯು

ಚಾಲ್ತಿ ವರ್ಷ ಚಂಪಾಷಷ್ಠಿ ದಿನ ಬೆಳಿಗ್ಗೆ ಶ್ರೀ ದೇವಳಕ್ಕೆ ದಾನಿಗಳಿಂದ ಅರ್ಪಿಸಲ್ಪಟ್ಟ ನೂತನ ಬ್ರಹ್ಮರಥದಲ್ಲಿ ಡಿಸೆಂಬರ್ 2 ರ ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವವು ಜರುಗಲಿರುವುದರಿಂದ ಹಾಗೂ ರಥೋತ್ಸವದ ಹಿಂದಿನ ದಿನವಾದ ರವಿವಾರ ರಜಾ ದಿನವಾಗಿದ್ದು, ಆ ದಿನ ರಾತ್ರಿ ಪಂಚಮಿ ರಥೋತ್ಸವವು ಜರುಗಲಿರುವುದರಿಂದ ಭಕ್ತಾದಿಗಳ ಅಧಿಕ ಒತ್ತಡದ ಸಂಭವವಿರುವ ನಿರೀಕ್ಷೆ ಇರುತ್ತದೆ.
ಕ್ಷೇತ್ರಕ್ಕೆ ಬರುವ ಸರ್ವ ಭಕ್ತಾದಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾಡಳಿತ ಹಾಗೂ ದೇವಳದ ಆಡಳಿತ ವತಿಯಿಂದ ಯಥಾವತ್ತಾಗಿ ಸಮಗ್ರ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲಾ ಸರಕಾರಿ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು, ವರ್ತಕರು, ಊರ – ನಾಗರಿಕರು, ಸ್ಥಳೀಯ ಸಂಘ ಸಂಸ್ಥೆಗಳು, ಪೋಲೀಸ್ ಇಲಾಖೆ, ಇತ್ಯಾದಿ ಹಾಗೂ ಸರ್ವಸಜ್ಜನ ಭಕ್ತಬಾಂಧವರು ಕೂಡ ಶ್ರೀ ದೇವರ ಜಾತ್ರಾ ಮಹೋತ್ಸವವನ್ನು ಅತ್ಯಂತ ವೈಭವದಿಂದ ಯಶಸ್ವಿಯಾಗಿ ಜರುಗಿಸುವಲ್ಲಿ ಪೂರ್ಣ ರೀತಿಯಲ್ಲಿ ಸಹಕಾರವನ್ನು ನೀಡುವಂತೆ ದೇವಳದ ಆಡಳಿತಾಧಿಕಾರಿಗಳಾಗಿರುವ ದ.ಕ. ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಜಲಜೀವನ್ ಮಿಷನ್ ಯೋಜನೆಯಲ್ಲಿ ವಿಳಂಬ ಸಹಿಸುವುದಿಲ್ಲ- ಜಿ.ಪಂ. ಸಿಇಓ ಡಾ. ಆನಂದ್

error: Content is protected !!
Scroll to Top