ಲಕ್ಷದೀಪೋತ್ಸವ ದಿಕ್ಸೂಚಿ ನುಡಿ ➤ ಜಗವು ಧರ್ಮದ ನೆಲೆಯಾಗಲಿ: ಡಾ.ಡಿ.ವೀರೇಂದ್ರ ಹೆಗ್ಗಡೆ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ನ.25  ಶುಕ್ರವಾರ ಸಂಜೆ ಚಾಲನೆ ಕಂಡ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಸಕ್ತ ವರ್ಷದ ಮೌಲಿಕ ಸಂದೇಶ ಇಡೀ ಜಗತ್ತು ಒಳಿತಿನೆಡೆಗೆ ಸಾಗಬೇಕಾದ ಅಗತ್ಯವನ್ನು ಮನಗಾಣಿಸಿತು. ಉಜಿರೆಯಿಂದ ಧರ್ಮಸ್ಥಳದವರೆಗಿನ ಪಾದಯಾತ್ರೆಯಲ್ಲಿ ಪಾಲ್ಗೊಂಡು ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತಸಮೂಹವನ್ನು ಉದ್ದೇಶಿಸಿ ಮಾತನಾಡಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನುಡಿಗಳು ಲಕ್ಷದೀಪೋತ್ಸವದ ಈ ಸಲದ ಕೇಂದ್ರ ಆಶಯವನ್ನು ಧ್ವನಿಸಿದವು.

ಕಳೆದ ಆರು ವರ್ಷಗಳಿಂದ ಆಯೋಜಿತವಾಗುತ್ತಿರುವ ಪಾದಯಾತ್ರೆಯ ಮಹತ್ವ ವಿವರಿಸುತ್ತಲೇ ಈ ವರ್ಷದ ಲಕ್ಷದೀಪೋತ್ಸವದ ಮೂಲಕ ಕಂಡುಕೊಳ್ಳಬೇಕಾದ ಮೌಲ್ಯ ಯಾವುದು ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಧರ್ಮಸ್ಥಳ ಸಾನಿಧ್ಯದ ದೈವಿಕತೆ ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಸಮೂಹದ ಸಕಾರಾತ್ಮಕ ಶಕ್ತಿಯನ್ನು ವಿಶ್ಲೇಷಿಸುತ್ತಲೇ ಇಡೀ ಜಗತ್ತು ಶಾಂತಿಗಾಗಿ ಕಂಡುಕೊಳ್ಳಬೇಕಾದ ಹಾದಿ ಯಾವುದಾಗಿರಬೇಕು ಎಂದು ವಿವರಿಸಿದರು. ಇಡೀ ಜಗತ್ತು ಧರ್ಮಸ್ಥಳವಾಗಿ ಪರಿವರ್ತಿತವಾಗಬೇಕಿದೆ. ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಜೊತೆಯಾಗಿ ನಡೆದುಕೊಂಡು ಬರುವ ಭಕ್ತಸಮೂಹದ ನಡೆಯು ಅನೇಕ ಅರ್ಥಗಳನ್ನು ಹೊಳೆಸುತ್ತದೆ. ಧರ್ಮಸ್ಥಳ ಕೇವಲ ಊರೊಂದರ ಹೆಸರಾಗಿ ಮಾತ್ರ ಉಳಿಯಬೇಕಾಗಿಲ್ಲ. ಶ್ರೀ ಮಂಜುನಾಥೇಶ್ವರ ದೇವಳದ ಗರ್ಭಗುಡಿಯ ಸನ್ನಿಧಿ ಮಾತ್ರ ಧರ್ಮಸ್ಥಳದ ಪ್ರಭೆ ಇದೆ ಎಂದುಕೊಳ್ಳಬೇಕಾಗಿಲ್ಲ. ಇಡೀ ರಾಜ್ಯ, ರಾಷ್ಟ್ರ ಮತ್ತು ಒಟ್ಟಾರೆ ಜಗತ್ತು ಧರ್ಮಸ್ಥಳವಾಗಿ ಬದಲಾದಾಗ ಮಾತ್ರ ಶಾಂತಿ ನೆಲೆಸುತ್ತದೆ. ಸಮೃದ್ಧಿ ತಾನಾಗಿಯೇ ಜೊತೆಯಾಗುತ್ತದೆ. ಬದಲಾವಣೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

Also Read  ಕಡಬ: ಯುವಕ ನಾಪತ್ತೆ - ದೂರು

ಧರ್ಮದ ಸ್ಥಳಕ್ಕೆ ಮಿತಿಯಿಲ್ಲ. ಗರ್ಭಗುಡಿಯಿಂದ ಹೊರಟ ಶಕ್ತಿ ಸರ್ವವ್ಯಾಪಿಯಾಗಬೇಕು. ಪಾದಯಾತ್ರೆಯಲ್ಲಿ ಭಾಗವಹಿಸಿದ ಭಕ್ತಸಮೂಹ ಜೊತೆಯಾಗಿ ನಡೆಯುವುದನ್ನು ಕೇವಲ ಧಾರ್ಮಿಕ ನಡೆಯನ್ನಾಗಿ ನೋಡಲಾಗದು. ಜೊತೆಯಾಗಿ ನಡೆದು ಆತ್ಮವಿಶ್ವಾಸವನ್ನು ದೃಢೀಕರಿಸಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ಹಾಗೆ ನಡೆದುಕೊಂಡು ಶ್ರೀ ಸನ್ನಿಧಿಯ ಮುಂದೆ ನಿಂತುಕೊಂಡು ಇಡೀ ವರ್ಷದಲ್ಲಿ ಭಿನ್ನವಾಗಿ ಬದುಕು ಕಟ್ಟಿಕೊಳ್ಳುವ ಭರವಸೆ ಜೊತೆಯಾಗಿಸಿಕೊಳ್ಳಬೇಕು. ಅಂಥ ಭರವಸೆಯೊಂದಿಗೆ ಬದುಕಬೇಕು. ಅಂಥ ಬದುಕಿನಿಂದ ಮಾತ್ರ ಇಡೀ ಜಗತ್ತು ಧರ್ಮಸ್ಥಳವಾಗುವುದಕ್ಕೆ ಸಾಧ್ಯ ಎಂದರು. ಖ್ಯಾತ ಕಲಾವಿದ ರವೀಂದ್ರ ಜೈನ್ ಅವರು ಹೊಳೆಸಿಕೊಂಡ ಸಾಲನ್ನು ಪ್ರಸ್ತಾಪಿಸುತ್ತಲೇ ಇಡೀ ಜಗತ್ತು ಹೇಗೆ ಧರ್ಮಸ್ಥಳವಾಗಿ ಪರಿವರ್ತಿತವಾಗಬಹುದು ಎಂದು ವಿವರಿಸಿದರು. ‘ಸಾರಿ ದುನಿಯಾ ಧರ್ಮಸ್ಥಳ್ ಹೋ’ ಎಂಬ ಅವರ ಸಾಲನ್ನು ಎಲ್ಲರೂ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಧರ್ಮಸ್ಥಳಕ್ಕೆ ವಿವಿಧ ಪ್ರದೇಶಗಳಿಂದ ಹಲವರು ಆಗಮಿಸುತ್ತಾರೆ. ತಾವು ಕಷ್ಟಗಳೊಂದಿಗೆ ಇರುವುದನ್ನು ಪ್ರಸ್ತಾಪಿಸಿ ಸಮಸ್ಯೆಗಳಿಂದ ಮುಕ್ತರಾಗಲು ಪ್ರಾರ್ಥಿಸುತ್ತಾರೆ. ಆ ಪ್ರಾರ್ಥನೆ ಫಲಿಸಿದ ನಂತರ ಮತ್ತೆ ಆಗಮಿಸಿ ಭಾವುಕರಾಗಿ ಮನಃಪೂರ್ವಕ ವಂದನೆಗಳನ್ನು ಸಲ್ಲಿಸುತ್ತಾರೆ. ಶ್ರದ್ಧಾಪೂರ್ವಕ ಪ್ರಾರ್ಥನೆ ಮತ್ತು ವಂದನೆಗಳ ಭಾವದೊಂದಿಗೆ ಕೃತಾರ್ಥರಾಗಿ ಸಂಭ್ರಮಿಸುತ್ತಾರೆ. ಇಂಥದ್ದೊಂದು ಸಂಭ್ರಮದ ಭಾವಗಳೆಲ್ಲವೂ ಜಗತ್ತಿನದ್ದಾಗಬೇಕಾದರೆ ಇಡೀ ವಿಶ್ವದಲ್ಲಿ ಧರ್ಮಸ್ಥಳದ ಪ್ರಭೆ ಹರಡಬೇಕು ಎಂದು ಅಭಿಪ್ರಾಯಪಟ್ಟರು.

Also Read  ಕರ್ನಾಟಕ ಕರಾವಳಿ ಮೀನುಗಾರಿಕಾ ಇಲಾಖೆಯಿಂದ ಮೀನುಗಾರಿಕೆ ಮಾಡದಂತೆ ನಿಷೇಧಾಜ್ಞೆ ಜಾರಿ

ದೀಪೋತ್ಸವದ ಅಂಗವಾಗಿ ಒಂದು ವಾರದಿಂದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮತ್ತು ಭಕ್ತರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. ಇದು ದೇಶಕ್ಕೆ ಮಾದರಿ. ಇವರ ದುಡಿಮೆಯಲ್ಲಿ ಶ್ರದ್ಧೆ ಇದೆ. ವಿಶ್ವಾಸ ಗಟ್ಟಿಯಾಗಿದ್ದರೆ ಯಾವ ಪ್ರವಾಹದ ಅಲೆಗಳು ನಮ್ಮನ್ನು ಸೋಕಲಾರವು. ಮೋಡಗಳು ಸೂರ್ಯನಿಗೆ ಅಡ್ಡ ಬಂದಂತೆ ಅವುಗಳು ಅರೆ ಕ್ಷಣದಲ್ಲಿ ಸರಿಯುತ್ತವೆ ಎಂದರು. ಕಷ್ಟಗಳು ಶಾಶ್ವತವಲ್ಲ. ನಿರಂತರ ಪರಿಶ್ರಮ, ನಂಬಿಕೆ, ಶ್ರದ್ಧೆಯೊಂದಿಗೆ ಪರಿವರ್ತನಾ ಪ್ರಪಂಚದಲ್ಲಿ ಬದುಕಬೇಕು ಎಂದರು. ಪ್ರತಿವರ್ಷ ಉಜಿರೆಯಿಂದ ಧರ್ಮಸ್ಥಳದವರೆಗೆ ಲಕ್ಷದೀಪೋತ್ಸವದ ಸಂದರ್ಭದಲ್ಲಿ ನಡೆಯುವ ಪಾದಯಾತ್ರೆಗೆ ದೈವಿಕ ಮಹತ್ವ ಇದೆ. ಇದರೊಂದಿಗೆ ಕಾಣದ ದೇವರ ಒಡನಾಟವಿದೆ. ಎಲ್ಲರೂ ಒಟ್ಟಾಗಿ ನಡೆಯುವ ಮತ್ತು ಹಾಗೆ ನಡೆಯುತ್ತಲೇ ಶ್ರೀ ಸನ್ನಿಧಿಗೆ ಬಂದು ಇಡೀ ವರ್ಷಕ್ಕೆ ಬೇಕಾಗುವ ಸಕಾರಾತ್ಮಕ ಶಕ್ತಿಯನ್ನು ಜೊತೆಯಾಗಿಸಿಕೊಳ್ಳುವ ನಡೆ ಮಹತ್ವದ್ದು ಎಂದು ನುಡಿದರು.

ಪ್ರತಾಪಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಜನಾರ್ದನ ದೇವಾಲಯದ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ್‍ರಾವ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top