(ನ್ಯೂಸ್ ಕಡಬ) newskadaba.com ರಾಮಕುಂಜ, ನ.2 ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಾದಕ ವ್ಯಸನದ ವಿರುದ್ಧ ಜನ ಸಂಚಲನ ಕಾರ್ಯಕ್ರಮವು ಆರೋಗ್ಯ ಕರ್ನಾಟಕ ಯುವ ಜನ ಜಾಗೃತಿ ಎಸ್.ಕೆ.ಎಸ್.ಎಸ್.ಎಫ್ ಆತೂರು ಕ್ಲಸ್ಟರ್ ವತಿಯಿಂದ ಶುಕ್ರವಾರ ಸಂಜೆ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ನಡೆಯಿತು.
ಮುಅಲ್ಲಿಮೀನ್ ಆತೂರು ವಲಯದ ಅಧ್ಯಕ್ಷ ಸಯ್ಯಿದ್ ಅನಸ್ ತಂಙಳ್ ಗಂಡಿಬಾಗಿಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡದ ಆಚರಣೆ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರ ಹಬ್ಬವಾಗಬೇಕು, ಇಂದು ಕನ್ನಡದ ಬಳಕೆ ಎಲ್ಲಾ ಕ್ಷೇತ್ರದಲ್ಲೂ ಕಡಿಮೆಯಾಗಿದೆ, ನಾವು ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಬಳಕೆ ಮಾಡಿದರೆ ಭಾಷೆ , ಸಂಸ್ಕೃತಿ ಉಳಿಯಬಹುದು ಎಂದೂ, ಮಾದಕ ವ್ಯಸನದ ಬಗ್ಗೆ ಇಂದು ಇದು ಒಂದು ಫ್ಯಾಷನ್ ಆಗಿ ಹೋಗಿದೆ, ಆದರೆ ಇದು ಮನುಕುಲಕ್ಕೆ ಮಾರಕವಾಗಿರುವುದರಿಂದ ಇದರ ವಿರುದ್ಧ ಜಾಗೃತಿ ಅನಿವಾರ್ಯವಾಗಿದೆ ಎಂದರು. ಆತೂರಿನ ಸಯ್ಯಿದ್ ಮಹಮ್ಮದ್ ಜುನೈದ್ ಜಿಫ್ರಿ ತಂಙಳ್ ದುವಾ ನೆರವೇರಿಸಿ ಮಾತನಾಡಿ, ಮಾದಕ ವ್ಯಸನ ಎನ್ನುವುದು ಯಾವುದೇ ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ, ಎಲ್ಲಾ ವರ್ಗಕ್ಕೂ ಈ ಅನಿಷ್ಟ ಆವರಿಸಿದೆ, ಇದನ್ನು ನಿರ್ಮೂಲನ ಮಾಡಬೇಕಾದರೆ ಯುವ ಜನತೆ ಮುಂದೆ ಬರಬೇಕು ಎಂದರು. ಉಳ್ಳಾಲದ ಸಯ್ಯದ್ ಮದನಿ ಅರೆಬಿಕ್ ಕಾಲೇಜಿನ ವಿದ್ಯಾರ್ಥಿ ಅನೀಸ್ ಸಾಲ್ಮರು ಪ್ರಮುಖ ಭಾಷಣ ಮಾಡಿ, ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ 2000 ವರ್ಷ ಇತಿಹಾಸ ಇರುವ ಆದಿದ್ರಾವಿಡ ಭಾಷೆಯಾದ ಕನ್ನಡಕ್ಕೆ ಅಪಾಯ ಬಂದೊದಗಿದೆ ಎಂದರು. ಅಧ್ಯಕ್ಷ ಸಿದ್ದಿಕ್ ನಿರಾಜೆ ಸಭೆಯ ಅಧ್ಯಕ್ಷತೆವಹಿಸಿದ್ದರು.