(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.5.ಮಹಿಳೆಯರಿಗಾಗಿ ಅನುಷ್ಟಾನಗೊಳಿಸುತ್ತಿರುವ ಭೂ ಒಡೆತನ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಜಮೀನು ಹೊಂದಿದ್ದು, ಜಮೀನು ಮಾರಾಟ ಮಾಡಲು ಇಚ್ಛಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿಲ್ಲದ ಭೂ ಮಾಲೀಕರಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿದೆ.
ಮಾರಾಟ ಮಾಡಲು ಇಚ್ಛಿಸುವ ಭೂ ಮಾಲೀಕರು ರೂ. 20 ಗಳ ಬಾಂಡ್ ಪೇಪರಿನಲ್ಲಿ ಒಪ್ಪಿಗೆ ಪತ್ರವನ್ನು ಪಹಣಿ ಪತ್ರಿಕೆ, ಮುಟ್ಯೇಷನ್ ನಕಲು, ಆಧಾರ್ ಕಾರ್ಡ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರದೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ದಕ್ಷಿಣ ಕನ್ನಡ ಜಿಲ್ಲೆ, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ/ವರ್ಗ ಭೂ ರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಭೂ ಒಡೆತನ ಸೌಲಭ್ಯ ಒದಗಿಸಲಾಗುವುದು. ಈ ಯೋಜನೆಯಡಿ ನೀಡುವ ಸೌಲಭ್ಯದಲ್ಲಿ ಶೇಕಡ 50ರಷ್ಟು ಸಹಾಯ ಧನವಾಗಿದ್ದು, ಉಳಿದ ಶೇಕಡ 50 ಭಾಗ ಸಾಲದ ರೂಪದಲ್ಲಿ ಶೇಕಡ 6ರ ಬಡ್ಡಿದರದಲ್ಲಿ 10 ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡುವ ಅವಕಾಶವಿದೆ.
ಯೋಜನೆಯಡಿ ನೊಂದಣಿ ಇಲಾಖೆಯ ಉಪನೋಂದಣಾಧಿಕಾರಗಳ ಕಛೇರಿಯ ಮಾರುಕಟ್ಟೆ ದರದ ಆಧಾರದ ಮೇಲೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಸ್ಥಿತ್ವದಲ್ಲಿರುವ ಆಯ್ಕೆ ಸಮಿತಿಯಿಂದ ದರ ನಿಗದಿಪಡಿಸಲಾಗುತ್ತದೆ(ಗರಿಷ್ಠ 15 ಲಕ್ಷ). ನಿಗಮಕ್ಕೆ ಮಾರಾಟ ಮಾಡಲು ಇಚ್ಛಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲ್ಲದ ಇತರೆ ಜಾತಿಯ ಮಾರಾಟಗಾರರು ತಮ್ಮ ವಿವರಗಳೊಂದಿಗೆ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿ.ಹೆಚ್.ಎಸ್ ರಸ್ತೆ, ಜನತಾ ಬಜಾರ್ ಕಟ್ಟಡ, 2ನೇ ಮಹಡಿ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:-0824-2420114ನ್ನು ಸಂಪರ್ಕಿಸಲು ಜಿಲ್ಲಾ ವ್ಯವಸ್ಥಾಪಕರು ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.