(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು ಸೆಂಪ್ಟಂಬರ್ 21 ರಂದು ಅಂತರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನದಂದು ಬೀಚ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.
ನವದೆಹಲಿಯ ಭೂ ವಿಜ್ಞಾನ ಸಚಿವಾಲಯ ಮತ್ತು ಚೆನ್ನೈನ ರಾಷ್ಟ್ರೀಯ ಕಡಲ ಸಂಶೋಧನಾ ಸಂಸ್ಥೆಗಳ ನಿರ್ದೇಶನದಂತೆ, ಕರ್ನಾಟಕದ ಏಕೈಕ ಕಾಲೇಜಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು ಅಂತರಾಷ್ಟ್ರೀಯ ಕರಾವಳಿ ಸ್ವಚ್ಚತಾ ದಿನವನ್ನು ತಣ್ಣೀರುಭಾವಿ ಕಡಲ ಕಿನಾರೆಯಲ್ಲಿ ನಡೆಸಿತು. ಸಂಯೋಜಕರಾದ ಕಾಲೇಜಿನ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ವಿಸ್ತರಣೆ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಎಸ್.ಆರ್. ಸೋಮಶೇಖರ್ ಮತ್ತು ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಎ.ಟಿ. ರಾಮಚಂದ್ರ ನಾಯ್ಕ ಸ್ವಚ್ಚತಾ ಮತ್ತು ಅರಿವು ಮೂಡಿಸುವ ರ್ಯಾಲಿಯನ್ನು ನಡೆಸಿದರು.
ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ನಿವೃತ್ತ ಡೀನ್ ಡಾ. ಎಸ್.ಎಂ. ಶಿವಪ್ರಕಾಶ್ ಮಾತನಾಡಿ ಪ್ಲಾಸ್ಟಿಕ್ ಎಂಬ ಅದ್ಭುತ ವಸ್ತುವು ಗಣನೀಯವಾಗಿ ಜನರಲ್ಲಿ ಬಳಕೆಯಲ್ಲಿದೆ. ದುರಾದೃಷ್ಟವಶಾತ್ ಮನಷ್ಯನು ಪ್ಲಾಸ್ಟಿಕ್‍ಗಳನ್ನು ಸುಲಭವಾಗಿ ತೀರಸ್ಕರಿಸುವುದರಿಂದ, ಮತ್ತು ಮರುಬಳಕೆ ಮಾಡದಿರುವುದರಿಂದ ಅತೀ ದೊಡ್ಡ ಮಾಲಿನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ನಿರಂತರವಾಗಿ ಪ್ಲಾಸ್ಟಿಕ್ ಮಾಲಿನ್ಯ ಮಾಡುವುದರಿಂದ ಪರಿಸರಕ್ಕೆ ದೊಡ್ಡಮಟ್ಟದಲ್ಲಿ ಹಾನಿ ಉಂಟಾಗುತ್ತಿದೆ ಎಂದು ತಿಳಿಸಿದರು. ಸ್ವಚ್ಚ ಭಾರತವಾಗಬೇಕಾದರೆ ಸ್ವಚ್ಚ ಪರಿಸರವನ್ನು ಕಾಪಾಡುವುದು ಅನಿವಾರ್ಯವೆಂದು ನುಡಿದರು.ಕಾಲೇಜಿನ ಡೀನ್ ಡಾ. ಎ. ಸೆಂತಿಲ್ ವೆಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಪ್ರತಿಯೊಬ್ಬ ವ್ಯಕ್ತಿಯು ಚಾಚುತಪ್ಪದೇ ಪ್ಲಾಸ್ಟಿಕ್ ಬಳಕೆಯನ್ನು ತಿರಸ್ಕರಿಸಬೇಕು ಎಂದು ತಿಳಿಸಿದರು.
ತಮ್ಮ ದಿನನಿತ್ಯದ ಬಳಕೆಗೆ ಪ್ಲಾಸ್ಟಿಕ್‍ನ್ನು ಸಂಪೂರ್ಣವಾಗಿ ನಿಷೇಧ ಮಾಡಿದರೆ ಮಾತ್ರ ನಮ್ಮ ಪರಿಸರವನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆಂದು ಹೇಳಿದರು. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಇತ್ತೀಚೆಗಂತೂ ಯಥೇಚ್ಚವಾಗಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಮಾರಕವಾಗಿದೆಯೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಾಧ್ಯಾಪಕ ಡಾ. ಶಿವಕುಮಾರ್ ಎಂ. ದೇಶದಲ್ಲಾಗುತ್ತಿರುವ ಪ್ಲಾಸ್ಟಿಕ್ ನ ಉತ್ಪಾದನೆ ಮತ್ತು ಬಳಕೆಯಿಂದಾಗುವ ಹಾನಿಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು.ಈ ಕಾರ್ಯಕ್ರಮದಲ್ಲಿ ಭಾರತೀಯ ಕೋಸ್ಟಗಾರ್ಡ್‍ನ ಸಿಬ್ಬಂದಿಗಳು, ಕಾಲೇಜಿನ ಸುಮಾರು 200 ವಿದ್ಯಾರ್ಥಿಗಳು ಮತ್ತು ಭೋದಕ-ಭೋದಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.ತಣ್ಣೀರುಭಾವಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಮತ್ತು ಅಲ್ಲಿಯ ಶಿಕ್ಷಕರು ಅರಿವು ಜಾಥಾ ಕಾರ್ಯಕ್ರಮಕ್ಕೆ ಕೈಜೋಡಿಸಿದರು.