(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.6.ಕರ್ನಾಟಕ ರಾಜ್ಯಾದ್ಯಾಂತ ಅತಿವೃಷ್ಟಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಸಂತ್ರಸ್ತರ ನೆರವಿಗೆ ಆಡಳಿತ ಮಂಡಳಿಯ ಅನುಮೋದನೆಯಂತೆ ಪ್ರಾಥಮಿಕ ಹಾಲು ಉತ್ಪಾದಕರ ಸಂಘಗಳಿಂದ, ಒಕ್ಕೂಟದ ನಿರ್ದೇಶಕರುಗಳಿಂದ, ಒಕ್ಕೂಟದ ನೌಕರರ ಒಂದು ದಿನದ ವೇತನವನ್ನು ಮತ್ತು ಒಕ್ಕೂಟದ ದೇಣಿಗೆ ಸೇರಿಸಿ,ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.
ಸಪ್ಟೆಂಬರ್ 4 ರಂದು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ, ಉಪಾಧ್ಯಕ್ಷರಾದ ಪ್ರಕಾಶಚಂದ್ರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ಡಾ: ಜಿ.ವಿ. ಹೆಗ್ಡೆ ಮತ್ತು ನಿರ್ದೇಶಕರುಗಳಾದ ಕಾಪು ದಿವಾಕರ ಶೆಟ್ಟಿ, ನಾರಾಯಣ ಪ್ರಕಾಶ್, ಪದ್ಮನಾಭ ಶೆಟ್ಟಿ ಅರ್ಕಜೆ, ಸುಧಾಕರ ರೈ, ನರಸಿಂಹ ಕಾಮತ್, ಸ್ಮಿತಾ ಶೆಟ್ಟಿ, ಸವಿತಾ ಶೆಟ್ಟಿ ತಂಡವು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.30 ಲಕ್ಷಗಳ ಚೆಕನ್ನು ಹಸ್ತಾಂತರಿಸಿದರು.
ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಮಿತ್ತಬಾಗಿಲು ಪ್ರದೇಶದಲ್ಲಿ ಸಂಕಷ್ಟಕ್ಕೊಳಗಾದ ಹಾಲು ಉತ್ಪಾದಕರ ರಾಸುಗಳಿಗೆ ಪಶು ಆಹಾರವನ್ನು ಮತ್ತು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 9,000 ಲೀಟರ್ ತೃಪ್ತಿ ಹಾಲು (90 ದಿನಗಳ ದೀರ್ಘ ಬಾಳಿಕೆಯ 180 ಮಿ.ಲೀ.ನ 50,000 ಪ್ಯಾಕೆಟ್) ಹಾಗೂ 650 ಸಂಖ್ಯೆ ಬೆಡ್‍ಶೀಟ್‍ಗಳನ್ನು ಖರೀದಿಸಿ ಒಟ್ಟು ರೂ.5.12 ಲಕ್ಷ ಮೌಲ್ಯದ ಉತ್ಪನ್ನಗಳನ್ನು ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.