ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ➤ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಕರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.21.ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕೆಲವೊಂದು ಮಾರ್ಗದರ್ಶನವನ್ನು ನೀಡಿದೆ.


ವಿಷಕಾರಿ ರಾಸಾಯನಿಕ ಲೋಹ ಲೇಪದ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ಗಣೇಶನ ಮೂರ್ತಿ ಬಳಕೆ ಮಾಡಬಾರದು, ಸಾದಾ ಜೇಡಿ ಮಣ್ಣಿನ, ಬಣ್ಣ ರಹಿತ ಅಥವಾ ನೈಸರ್ಗಿಕ ಬಣ್ಣವುಳ್ಳ ಹಬ್ಬದ ಗಣೇಶ ವಿಗ್ರಹವನ್ನು ಸ್ಥಾಪಿಸಿ ಪೂಜಿಸಿ, ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ, ಬಾವಿ, ಕೆರೆ, ನದಿಗಳಲ್ಲಿ ಗಣಪತಿ ವಿಸರ್ಜನೆ ಮಾಡಬಾರದು, ಹಾಗೆ ಮಾಡಿದರೆ ಅಂತರ್ಜಲ ಹಾಗೂ ಕುಡಿಯುವ ನೀರಿನ ಸೆಲೆ ಎಲ್ಲವೂ ಬತ್ತಿ ಹೋಗುತ್ತದೆ, ಬದಲಿಗೆ ಬಕೆಟ್‍ನಲ್ಲಿ ಅಥವಾ ನಗರಪಾಲಿಕೆ/ ಪುರಸಭೆ ನಿಗದಿಪಡಿಸುವ ಸಂಚಾರಿ ವಿಸರ್ಜನೆ ವಾಹನದಲ್ಲಿ ವಿಸರ್ಜಿಸಿ, ಮಹಾನಗರಪಾಲಿಕೆ ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆಯಬೇಕು, ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬಾರದು, ಪಟಾಕಿಯ ಹೊಗೆ ವಿಷಪೂರಿತ ಅಲ್ಲದೇ ರಸ್ತೆ ತುಂಬಾ ಕಸವಾಗುತ್ತದೆ, ಅತಿಯಾದ ಶಬ್ಧವು ಕಿವಿಗೆ ಹಾನಿಕರ.

Also Read  ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಮೈಸೂರು ಸಂಸದ

ಗಣಪತಿ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬಾರದು, ಕಸ ವಿಲೇವಾರಿ ವಾಹನಕ್ಕೆ ನೀಡಬೇಕು.ಕೆರೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ : ಗಣೇಶ ಮೂರ್ತಿಗಳನ್ನು ಕೊಳಗಳು, ಕೆರೆಗಳಲ್ಲಿ ವಿಸರ್ಜಿಸುವುದಾದರೆ ಎಲೆಗಳು, ಹೂವುಗಳು, ಕೃತಕ ಅಲಂಕಾರಿಕ ವಸ್ತುಗಳನ್ನು ಮೂರ್ತಿಯಿಂದ ಪ್ರತ್ಯೇಕಿಸಬೇಕು. ಕೊಳದ ಒಂದು ಮೂಲೆಯಲ್ಲಿ ತೆಗೆಯಬಹುದಾದ ಸಿಂಥೆಟಿಕ್ ಹಾಳೆಯನ್ನು ಹಾಕಿ ಅನಂತರ ವಿಸರ್ಜಿಸಬೇಕು. ವಿಸರ್ಜನಾ ಕಾರ್ಯ ಪೂರ್ಣಗೊಂಡ ನಂತರ ಸಿಂಥೆಟಿಕ್ ಹಾಳೆಯನ್ನು ತ್ಯಾಜ್ಯಗಳ ಸಮೇತವಾಗಿ ಹೊರತೆಗೆಯಬಹುದು. ಮೂರ್ತಿಗೆ ಬಳಕೆ ಮಾಡಿದ ಮಣ್ಣು ತಳದಲ್ಲಿ ಸಂಗ್ರಹವಾಗುವುದಕ್ಕೆ ಅನುಕೂಲವಾಗುವಂತೆ ಸುಣ್ಣವನ್ನು ಸೇರ್ಪಡೆ ಮಾಡಬೇಕು.

ನದಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ: ನದಿಗಳ ದಡದಲ್ಲಿ ಮಣ್ಣಿನ ತಡೆಗೋಡೆಗಳನ್ನು ಹಾಕಿ ಕೃತಕ ಕೊಳಗಳನ್ನು ನಿರ್ಮಿಸಬೇಕು. ವಿಸರ್ಜನೆಗೆ ಮೊದಲು ಕೊಳದ ತಳದಲ್ಲಿ ತೆಗೆಯಬಹುದಾದ ಸಿಂಥೆಟಿಕ್ ಹಾಳೆಯನ್ನು ಹಾಕಬೇಕು. ಮೂರ್ತಿಗಳ ವಿಸರ್ಜನೆ ಪೂರ್ಣಗೊಂಡ 48 ಗಂಟೆಗಳ ಒಳಗೆ ವಿಸರ್ಜನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯದ ಸಮೇತವಾಗಿ ಸಿಂಥೆಟಿಕ್ ಹಾಳೆಯನ್ನು ಹೊರತಗೆಯಬೇಕು.
ಸಮುದ್ರಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ: ಸಮುದ್ರದಲ್ಲಿ ಮೂರ್ತಿಗಳ ವಿಸರ್ಜನೆ ಮಾಡುವುದಾದರೆ ಎತ್ತರದ ಅಲೆಗಳು ಮತ್ತು ಸಣ್ಣ ಅಲೆಗಳ ನಡುವಿನ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.ಸ್ಥಳದ ಆಯ್ಕೆಗೆ ಪೂರ್ವಭಾವಿಯಾಗಿ ಕಡಿಮೆ ಅಲೆಗಳು ಮತ್ತು ಎತ್ತರದ ಅಲೆಗಳನ್ನು ಗುರುತಿಸಿಕೊಳ್ಳಬೇಕು. ವಿಸರ್ಜನಾ ಕಾರ್ಯದ ಮೇಲ್ವಿಚಾರಣೆಗೆ ಯಂತ್ರ ಚಾಲಿತ ಬೋಟ್‍ಗಳು, ರಕ್ಷಣಾ ಸಿಬ್ಬಂದಿ, ಗೃಹ ರಕ್ಷಕ ದಳ ಮುಂತಾದವರನ್ನು ಸಾಕಷ್ಟು ಪ್ರಮಾಣದ ಸುರಕ್ಷಿತ ಸಾಮಾಗ್ರಿಗಳೊಂದಿಗೆ ನಿಯೋಜಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಪರಿಸರ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದಾಗ ಜಾರಿ ಬಿದ್ದ (26)ವರ್ಷದ ಯುವಕ ➤ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ

error: Content is protected !!
Scroll to Top