(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.29. ಜೋಕಟ್ಟೆ ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ಜು.31ರಿಂದ ಆ.4ರ ವರೆಗೆ ನಡೆಯಲಿದೆ.
೩೧ರಂದು ಶೈಖುನಾ ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಅಂಜುಮಾನ್ ಸುವರ್ಣಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ಹುಸೈನ್ ತಿಳಿಸಿದ್ದಾರೆ.ಆ.೧ರಂದು ಕಾವಳಕಟ್ಟೆ ಇಸ್ಲಾಮಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಅಲ್‌ಹಾಫಿಲ್ ಸುಫ್ಯಾನ್ ಸಖಾಫಿ, ಆ.೨ರಂದು ಅಬೂಬಕ್ಕರ್ ಫೈಝಿ ಕುಂಭರಾಜೆ, ಆ.೩ರಂದು ಅಲ್ ಹಾಫಿಲ್ ಕುಮ್ಮನಮ್ ನಿಝಾಮುದ್ದಿನ್ ಅಝ್ಹರಿ ಅಲ್ ಖಾಸಿಮಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಆ.೪ರಂದು ನಡೆಯುವ ಸಮಾರೋಪ ಸಮಾರಂಭವನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಅಂಜುಮಾನ್ ವಿದ್ಯಾ ಸಂಸ್ಥೆಯ ವಿಸ್ಕೃತ ಕಟ್ಟಡವನ್ನು ಎಂಆರ್‌ಪಿಎಲ್ ಸಂಸ್ಥೆಯ ಗ್ರೂಪ್ ಜನರಲ್ ಮ್ಯಾನೇಜರ್ ಬಿ.ಎಚ್.ವಿ. ಪ್ರಸಾದ್ ಉದ್ಘಾಟಿಸಲಿದ್ದಾರೆ. ಅಲ್ ಹಾಫಿಲ್ ಸಿರಾಜುದ್ದೀನ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜೋಕಟ್ಟೆ ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯು ೧೯೬೮-೬೯ರಲ್ಲಿ ಸ್ಥಾಪನೆಯಾಯಿತು. ೫೦ ವರ್ಷಗಳಿಂದ ನಿರಂತರ ಜನಪರ ಕಾರ್ಯಗಳನ್ನು ಏರ್ಪಡಿಸುತ್ತಾ ಜನ ಮನ್ನಣೆ ಪಡೆದಿದೆ. ಪ್ರೀ ಕ್ಲಾಸ್, ಎಲ್‌ಕೆಜಿ, ಯುಕೆಜಿ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಹೈಸ್ಕೂಲ್, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿರುವ ಪದವಿ ಪೂರ್ವ ಕಾಲೇಜು, ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಸಂಯೋಜಿಸಿ ಬಿಕಾಂ ಪದವಿ ಕಾಲೇಜುಗಳನ್ನು ಸ್ಥಾಪಿಸಿ, ಬಡವರ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ಧಾರ್ಮಿಕ ಕಾರ್ಯಕ್ರಮಗಳು, ಪರಿಸರದ ಆರೋಗ್ಯ ಸಂರಕ್ಷಣೆಗಾಗಿ ವೈದ್ಯಕೀಯ ಶಿಬಿರಗಳು, ಯುವಕರಲ್ಲಿ ರಾಷ್ಟ್ರೀಯತೆ ಸಹಬಾಳ್ವೆ ಮೈಗೂಡಿಸಿಕೊಳ್ಳಲು, ಉದ್ಯೋಗ ಸಂಬಂಧಪಟ್ಟ ತರಬೇತಿ ಶಿಬಿರಗಳು ಹಾಗೂ ಜೋಕಟ್ಟೆ ಪ್ರದೇಶ ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಯೆನೆಪೋಯ ಮೆಡಿಕಲ್ ಕಾಲೇಜಿನ ಸಹಕಾರದೊಂದಿಗೆ ಉಚಿತ ಡೆಂಟಲ್ ಮತ್ತು ವೈದ್ಯಕೀಯ ಸೇವೆ ಒದಗಿಸುತ್ತ ಬರುತ್ತಿದೆ ಎಂದು ಅಂಜುಮಾನ್ ಖುವ್ವತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ಮುಹಮ್ಮದ್ ಸಿರಾಕ್ ಮನೆಗಾರ ಹೇಳಿದ್ದಾರೆ.