(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.5.ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ನೂತನ ಸಾರಥಿ ನೇಮಕಗೊಂಡಿದ್ದಾರೆ. ‘ರಾಜೀನಾಮೆ ಸ್ವೀಕರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ’ ಎಂಬ ವಿಶ್ವನಾಥ್ ಎಚ್ಚರಿಕೆ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂಬುದನ್ನು ಅರಿತು ರಾಷ್ಟ್ರೀಯ ಆಧ್ಯಕ್ಷ ಎಚ್.ಡಿ. ದೇವೇಗೌಡ ಗುರುವಾರ ರಾಜ್ಯಾಧ್ಯಕ್ಷರ ಹೆಸರನ್ನು ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಸಕಲೇಶಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿರುವ ಎಚ್.ಕೆ. ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ನೇಮಕವನ್ನೂ ದೇವೇಗೌಡರು ಪ್ರಕಟಿಸಿದರು. ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ ಅವರಿಗೆ ಕರ್ನಾಟಕ ಪ್ರದೇಶ ಯುವ ಜನತಾದಳ (ಜಾತ್ಯತೀತ)ದ ಪಟ್ಟ ಕಟ್ಟಲಾಗಿದೆ. ಆ ಮೂಲಕ ಮತ್ತೆ ಕುಟುಂಬ ಪ್ರೀತಿಯನ್ನು ಗೌಡರು ಮೆರೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂಭಾಷಣೆ ಇರುವ ಅಪರೇಷನ್ ಕಮಲದ ಸಿಡಿ ಬಿಡುಗಡೆ ಮಾಡಿ ದೊಡ್ಡ ಸುದ್ದಿ ಮಾಡಿದ್ದ ಶರಣ್ಗೌಡ ಕಂದಕೂರ್ ಅವರನ್ನು ಯುವ ಘಟಕದ ಮಹಾಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.ಜೆ.ಪಿ.ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಅಡಗೂರು ವಿಶ್ವನಾಥ್ ಅವರು ಎಚ್.ಕೆ.ಕುಮಾರಸ್ವಾಮಿಗೆ, ಯುವ ಘಟಕದ ಅಧ್ಯಕ್ಷರಾಗಿದ್ದ ಮಧು ಬಂಗಾರಪ್ಪ ಅವರು ನಿಖಿಲ್ ಕುಮಾರಸ್ವಾಮಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿದರು.