(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.3.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತೀ ವರ್ಷ ರೂ 6000 ಗಳನ್ನು ಪ್ರತೀ ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ಮೂರು ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ 2,08,918 ಒಟ್ಟು ಸಂಖ್ಯೆಯ ರೈತರಿಗೆ 1,05,780 ರೈತರನ್ನು ನೋಂದಾಯಿಸಲಾಗಿದ್ದು ಶೇಕಡಾ 50.63 ರಷ್ಟು ಪ್ರಗತಿಯಾಗಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1,00,000 ರಷ್ಟು ರೈತರು ಸದ್ರಿ ಯೋಜನೆಯಡಿ ನೋಂದಾಯಿಸಲು ಬಾಕಿ ಇದ್ದು ಸದ್ರಿ ರೈತರಿಗೆ ಈ ಯೋಜನೆಯಡಿ ನೋಂದಾಯಿಸಲು ಅಂತಿಮ ಅವಕಾಶವನ್ನು ನೀಡಲಾಗಿರುತ್ತದೆ.ಆದುದರಿಂದ ನೋಂದಾಯಿಸಲು ಬಾಕಿ ಇರುವ ಕೃಷಿ ಜಮೀನು ಹೊಂದಿರುವವರು ಕೂಡಲೇ ತಮ್ಮ ಆಧಾರ್ ಸಂಖ್ಯೆ ಪಹಣಿ ವಿವರಗಳು ಹಾಗೂ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಹತ್ತಿರದ ಗ್ರಾಮಕರಣಿಕರ ಕಚೇರಿ, ನಾಡಕಚೇರಿ, ತಾಲೂಕು ಕಚೇರಿ, ಗ್ರಾಮ ಪಂಚಾಯತಿ ಕಚೇರಿಯ ಬಾಪೂಜಿ ಸೇವಾ ಕೇಂದ್ರಗಳು,ರೈತ ಸಂಪರ್ಕ ಕೇಂದ್ರ ಅಥವಾ ಆಟಾಲ್‍ಜಿ ಜನಸ್ನೇಹಿ ಕೇಂದ್ರಗಳಲ್ಲಿ ಸ್ವಯಂ ಘೋಷಣಾ ಪತ್ರದೊಂದಿಗೆ ನೊಂದಾವಣೆ ಮಾಡಲು ತಿಳಿಸಿದೆ.
ನಿವೃತ್ತ/ಹಾಲಿ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ ನೌಕರರು( ಗ್ರೂಪ್ ಡಿ ಹೊರತುಪಡಿಸಿ), ರೂ 10,000 ಗಿಂತ ಹೆಚ್ಚಿನ ಮೊತ್ತ ಪಡೆಯುತ್ತಿರುವ ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು ( ವೈದ್ಯರು, ಅಭಿಯಂತರರು, ವಕೀಲರು, ಮತ್ತು ಇತರೆ), ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಾಯಿಸಲು ಅನರ್ಹರಾಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಗ್ರಾಮಲೆಕ್ಕಾಧಿಕಾರಿ(ವಿಎ) ಕಚೇರಿಯನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.